ಮಾಲ್ಡಾ (ಪಶ್ಚಿಮ ಬಂಗಾಳ): ಬಿಪರ್ಜೊಯ್ ಅಬ್ಬರ ಮುಗಿತು ಈಗ ಗುಡುಗು ಸಿಡಿಲಿನ ಅಬ್ಬರ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದಲ್ಲಿ ಸಿಡಿಲು- ಗುಡುಗು ಹಾಗೂ ಮಿಂಚಿಗೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ.
ಸಿಡಿಲು ಬಡಿದು 7 ಜನರು ಸಾವನ್ನಪ್ಪಿರುವ ಬಗ್ಗೆ ಮಾತನಾಡಿರುವ ಮಾಲ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತಿನ್ ಸಿಂಘಾನಿಯಾ, "ಮಾಲ್ಡಾವನ್ನು ಅಪ್ಪಳಿಸಿದ ಭಾರಿ ಗುಡುಗು ಸಹಿತ ಮಳೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೃತರನ್ನು ಕೃಷ್ಣೋ ಚೌಧರಿ (65), ಉಮ್ಮೆ ಕುಲ್ಸುಮ್ (6), ದೆಬೋಶ್ರೀ ಮಂಡಲ್ (27), ಸೋಮಿತ್ ಮಂಡಲ್ (10), ನಜ್ರುಲ್ ಎಸ್‌ಕೆ (32), ರಾಬಿಜಾನ್ ಬೀಬಿ (54), ಮತ್ತು ಇಸಾ ಸರ್ಕಾರ್ (ಎಂಟು) ಎಂದು ಗುರುತಿಸಲಾಗಿದೆ.
ಹಳೆ ಮಾಲ್ಡಾದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಉಳಿದ ಆರು ಜನರು ಕಾಲಿಯಾಚಕ್ ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತಿನ್ ಸಿಂಘಾನಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಒಟ್ಟು ಒಂಬತ್ತು ಜಾನುವಾರುಗಳು ಸಾವನ್ನಪ್ಪಿವೆ ಎಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ: ಸಿಡಿಲು ಬಡಿದು ಸಾವು: ಸಂತ್ರಸ್ತರ ಮನೆಗೆ ತೆರಳಿ ಉಮೇಶ್ ಜಾಧವ್ ಸಾಂತ್ವನ
ಇದಲ್ಲದೇ, ಮಾಲ್ಡಾದ ಬಂಗಿತೋಲಾ ಹೈಸ್ಕೂಲ್ ಬಳಿ ಶಾಲಾ ಸಮಯದಲ್ಲೇ ಸಿಡಿಲು ಬಡಿದು ಕನಿಷ್ಠ 12 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಬಂಗಿಟೋಲಾ ಗ್ರಾಮಾಂತರ ಆಸ್ಪತ್ರೆ ಮತ್ತು ಮಾಲ್ಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಲ್ಡಾ ಜಿಲ್ಲಾಧಿಕಾರಿ ನಿತಿನ್ ಸಿಂಘಾನಿಯಾ ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಮತ್ತು ಬೆಂಬಲ ನೀಡಲಾಗುಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಭರವಸೆ ನೀಡಿದ್ದಾರೆ.
2021ರಲ್ಲಿ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರ ಸೇರಿದಂತೆ ವಿವಿಧೆತೆ ಒಂದೇ ದಿನ ಸಿಡಿಲಿಗೆ 61 ಮಂದಿ ಬಲಿಯಾಗಿದ್ದರು. ಹಲವು ಮಂದಿ ಸಿಡಿಲಿನ ಅಬ್ಬರದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಉತ್ತರ ಪ್ರದೇಶದ ಕೌಶಂಬಿ, ಫತೇಪುರ್ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಒಂದೇ 41 ಮಂದಿ ಸಾವನ್ನಪ್ಪಿದ್ದರು. ಪಶ್ಚಿಮ ಬಂಗಾಳದಲ್ಲೂ ಹೀಗೆ ಹಲವು ಮಂದಿ ಸಿಡಿಲಿಗೆ ಪ್ರಾಣ ಬಿಟ್ಟಿದ್ದರು. ಈ ವರ್ಷವೂ ಇಂತಹುದೇ ಘಟನೆಗಳು ವರದಿಯಾಗುತ್ತಿವೆ.
ಇದನ್ನು ಓದಿ: ಗದಗ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ; ಸಿಡಿಲಿಗೆ ಇಬ್ಬರು ಕುರಿಗಾಯಿ ಯುವಕರು ಸಾವು