ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ರೈತರ ಇನ್ನಿತರ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯದ ಹೊರತು ನಾವು ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ ಅಂಗೀಕಾರವಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರ ಪ್ರಮುಖ ಬೇಡಿಕೆಯಾದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಬಗ್ಗೆ ಸರ್ಕಾರ ಕಾನೂನು ತರಬೇಕು. ಅಲ್ಲದೇ, ರೈತ ಹೋರಾಟದಲ್ಲಿ ಮೃತಪಟ್ಟ 750 ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸರ್ಕಾರ ಅಧಿವೇಶನದಲ್ಲಿ ಚರ್ಚಿಸಬೇಕು. ಈ ಎಲ್ಲಾ ವಿಷಯಗಳು ಇತ್ಯರ್ಥ ಕಾಣದ ಹೊರತು ನಾವು ಪ್ರತಿಭಟನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಕೇಂದ್ರ ಸರ್ಕಾರ ದೇಶದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಬಾರದು ಎಂದು ಇಚ್ಛಿಸಿದಲ್ಲಿ ಮೊದಲು ರೈತರ ಎಲ್ಲಾ ಬೇಡಿಕೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಇಲ್ಲವಾದಲ್ಲಿ ರೈತ ಹೋರಾಟ ಹೀಗೆಯೇ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವದ ಕೊಲೆ.. 12 ಸಂಸದರ ಅಮಾನತಿಗೆ ವಿಪಕ್ಷಗಳ ಆಕ್ರೋಶ, ನಾಳೆ ಸಭೆಗೆ ನಿರ್ಧಾರ..
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ಅಂಗೀಕರಿಸಲಾಗಿದೆ.