ನವದೆಹಲಿ: ಏರ್ ಇಂಡಿಯಾ ಪ್ರಯಾಣಿಕರನ್ನು ಇಂದು ಹೊಸ ಘೋಷಣೆಯೊಂದಿಗೆ ಸ್ವಾಗತಿಸಲಾಗುತ್ತಿದೆ. ಏರ್ ಇಂಡಿಯಾ ವಿಮಾನಗಳಲ್ಲಿ ಶುಕ್ರವಾರದಂದು ಪ್ರಯಾಣಿಸಲಿರುವ ಪ್ರಯಾಣಿಕರು ವಿಮಾನದಲ್ಲಿ ಪ್ರಕಟಣೆಯ ಸಮಯದಲ್ಲಿ ಏರ್ ಇಂಡಿಯಾವನ್ನು ಟಾಟಾ ಸಮೂಹವು ಸ್ವಾಧೀನಪಡಿಸಿಕೊಂಡಿರುವ ವಿಚಾರವನ್ನು ಕೇಳುತ್ತಾರೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಭಾರತ ಸರಕಾರ ಗುರುವಾರ ಮಧ್ಯಾಹ್ನ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಅಧಿಕೃತವಾಗಿ ಹಸ್ತಾಂತರಿಸಿತು. ಸುಮಾರು 69 ವರ್ಷಗಳ ನಂತರ ಟಾಟಾ ಸಮೂಹ ವಿಮಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಶುಕ್ರವಾರ ಹೊರಡುವ ಪ್ರತಿ ವಿಮಾನದಲ್ಲಿ ಬಾಗಿಲು ಮುಚ್ಚಿದ ನಂತರ ನಿರ್ದಿಷ್ಟ ಘೋಷಣೆ ಮಾಡಲು ಏರ್‌ಲೈನ್‌ನ ಪೈಲಟ್‌ಗಳಿಗೆ ಕಾರ್ಯಾಚರಣೆ ವಿಭಾಗವು ತಿಳಿಸಿದೆ ಎಂದು ಆದೇಶದಲ್ಲಿದೆ.
ಇದನ್ನೂ ಓದಿ: ಟಾಟಾ ಗ್ರೂಪ್‌ಗೆ ಅಧಿಕೃತವಾಗಿ ಏರ್ ಇಂಡಿಯಾ ಹಸ್ತಾಂತರ.. ಮರಳಿ ಗೂಡು ಸೇರಿದ ವಿಮಾನಯಾನ ಸಂಸ್ಥೆ
ಪ್ರಕಟಣೆ ಹೀಗಿರುತ್ತದೆ: 'ಆತ್ಮೀಯ ಪ್ರಯಾಣಿಕರೇ, ಇದು ನಿಮ್ಮ ಕ್ಯಾಪ್ಟನ್ ಮಾತನಾಡುತ್ತಿದ್ದಾರೆ.. ವಿಶೇಷ ಘಟನೆಯ ಪ್ರತೀಕವಾಗಿರುವ ಈ ಐತಿಹಾಸಿಕ ವಿಮಾನಕ್ಕೆ ಸುಸ್ವಾಗತ. ಇಂದು, ಏಳು ದಶಕಗಳ ನಂತರ ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ಗ್ರೂಪ್‌ನ ಭಾಗವಾಗಿದೆ. ಪ್ರತಿ ಏರ್ ಇಂಡಿಯಾ ವಿಮಾನದಲ್ಲಿ ನವೀಕೃತ ಬದ್ಧತೆ ಮತ್ತು ಉತ್ಸಾಹದಿಂದ ನಿಮಗೆ ಸೇವೆ ಸಲ್ಲಿಸಲು ನಾವು ಎದುರು ನೋಡುತ್ತಿದ್ದೇವೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಏರ್ ಇಂಡಿಯಾದ ಭವಿಷ್ಯಕ್ಕೆ ಸುಸ್ವಾಗತ.. ನೀವು ಪ್ರಯಾಣವನ್ನು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಧನ್ಯವಾದಗಳು' ಎಂದು ಹೇಳಲಾಗಿದೆ. ಟಾಟಾ ಒಡೆತನದ ಏರ್ ಇಂಡಿಯಾ ಸಮೂಹವನ್ನು ವಿಶ್ವ ದರ್ಜೆಯ ವಿಮಾನಯಾನ ಮಾಡಲು ಬಯಸುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಲಾಗಿದೆ.
ಏರ್ ಇಂಡಿಯಾ ಸ್ಟ್ರಾಟೆಜಿಕ್ ಡಿಇನ್‌ವೆಸ್ಟ್‌ಮೆಂಟ್ ವಹಿವಾಟು ಇಂದು ಪೂರ್ಣಗೊಂಡಿದೆ. ಸರ್ಕಾರ ಸ್ಟ್ರಾಟೆಜಿಕ್ ಪಾರ್ಟ್‌ನರ್‌ನಿಂದ (ಎಂ/ಎಸ್ ಟಾಲೇಸ್ ಪ್ರೈವೇಟ್ ಲಿಮಿಟೆಡ್, ಎಂ/ಎಸ್ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ) 2,700 ಕೋಟಿ ರೂ. ಸ್ವೀಕರಿಸಿದೆ. ಏರ್ ಇಂಡಿಯಾ ಮತ್ತು ಎಐಎಕ್ಸ್‌ಎಲ್‌ನಲ್ಲಿ ರೂ 15,300 ಕೋಟಿ ಮತ್ತು ಏರ್ ಇಂಡಿಯಾದ ಷೇರುಗಳನ್ನು (ಏರ್ ಇಂಡಿಯಾದ ಶೇಕಡ 100 ಷೇರುಗಳು ಮತ್ತು ಅದರ ಅಂಗಸಂಸ್ಥೆ ಎಐಎಕ್ಸ್‌ಎಲ್ ಮತ್ತು ಎಐಎಸ್‌ಎಟಿಎಸ್‌ನ ಶೇಕಡ 50 ಷೇರುಗಳು) ಕಾರ್ಯತಂತ್ರದ ಪಾಲುದಾರರಿಗೆ ವರ್ಗಾಯಿಸುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಟಾಟಾ ಗ್ರೂಪ್ ಇಂದಿನಿಂದ ಏರ್‌ಲೈನ್‌ನ ನಿರ್ವಹಣೆ ಮತ್ತು ನಿಯಂತ್ರಣವನ್ನು ವಹಿಸಿಕೊಂಡಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಕಂಪನಿಯ ಇತರ ಹಿರಿಯ ಅಧಿಕಾರಿಗಳು ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಸ್ತಾಂತರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರನ್, "ಟಾಟಾ ಗ್ರೂಪ್‌ನೊಂದಿಗೆ ಏರ್ ಇಂಡಿಯಾ ವಾಪಸ್ ಆಗಿರುವುದು ನಮಗೆ ಸಂತೋಷ ತಂದಿದೆ. ವಿಶ್ವದರ್ಜೆಯ ವಿಮಾನಯಾನವನ್ನು ರಚಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಜಾಗತಿಕ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದ ಟಾಟಾ ಗ್ರೂಪ್