ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ, ರೈತ ಮುಖಂಡರ ನಡುವಿನ ಮಾತುಕತೆ ಇನ್ನೂ ಸಫಲವಾಗಿಲ್ಲ. ದಿನದಿಂದ ದಿನಕ್ಕೆ ಅನ್ನದಾತರ ಆಕ್ರೋಶದ ಕೂಗು ಜೋರಾಗುತ್ತಲೇ ಇದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತೊಮ್ಮೆ ಮಾತುಕತೆಗೆ ಬರುವಂತೆ ರೈತ ಮುಖಂಡರಿಗೆ ಆಹ್ವಾನ ನೀಡಿದ್ರೂ ಅನ್ನದಾತರು ಮಾತ್ರ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲದೇ, ಕನಿಷ್ಠ ಬೆಂಬಲ ಬೆಲೆ ಬಗ್ಗೆ ಖಾತರಿ ನೀಡುವಂತೆ ಒತ್ತಾಯಿಸಿದ್ದಾರೆ.
ಎಂಎಸ್‌ಪಿ ಬಗ್ಗೆ ನಮಗೆ ಭದ್ರತೆ ಬೇಕು. ಕನಿಷ್ಠ ಬೆಂಬಲ ಬೆಲೆಯಡಿ ನಮ್ಮ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಖಾತರಿಬೇಕು. ಎಂಎಸ್‌ಪಿ ಖಾತ್ರಿ ಕಾಯ್ದೆ ಜಾರಿಗೆ ತಂದರೆ ರೈತರಿಗೆ ಲಾಭವಾಗಲಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸರ್ದಾರ್ ವಿಎಂ ಸಿಂಗ್ ಹೇಳಿದ್ದಾರೆ.
ಆಲೂಗಡ್ಡೆ, ಕಬ್ಬು, ಧಾನ್ಯಗಳು, ತರಕಾರಿ ಹಾಗೂ ಹಾಲಿಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಪತ್ರದ ಮೂಲಕ ನೀಡುವ ಯಾವುದೇ ಖಾತರಿ ನಮಗೆ ಬೇಕಿಲ್ಲ. ಕನಿಷ್ಠ ಬೆಂಬಲ ಬೆಲೆಗಾಗಿಯೇ ಇದೀಗ ಕಾನೂನು ರೂಪಿಸಬೇಕು ಎಂದು ಉತ್ತರ ಪ್ರದೇಶದ ರೈತ ಮುಖಂಡ ದುಂಗಾರ್ ಸಿಂಗ್ ಹೇಳಿದ್ದಾರೆ.