ಚೆನ್ನೈ: ಡಿಎಂಕೆ ಪಕ್ಷವನ್ನು ಹಿಂದು ವಿರೋಧಿ ಎಂದು ಬಿಜೆಪಿ ಬಿಂಬಿಸುತ್ತಿದೆ. ಸಂಘಪರಿವಾರ ಮತ್ತು ಬಿಜೆಪಿ ಸುಳ್ಳಿನ ಬಲೂನನ್ನು ಸತ್ಯದ ಸೂಜಿಯಿಂದ ಸಲೀಸಾಗಿ ಚುಚ್ಚಿ ಹೊಡೆದು ಹಾಕಬಹುದು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದರು. ಪಕ್ಷದ ಸಾಮಾಜಿಕ ಮಾಧ್ಯಮ ಪಡೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಬಿಜೆಪಿ ಸುಳ್ಳು ಹೇಳುವ ಮೂಲಕ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದೆ. ಹೀಗಾಗಿ ಸುಳ್ಳಿನ ಬಲೂನನ್ನು ಸತ್ಯದ ಸೂಜಿಯಿಂದ ಚುಚ್ಚಿ, ಸತ್ಯವನ್ನು ಬಯಲು ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಗೋಬೆಲ್ಸ್ಗಳ ತಂಡ: ಹಿಟ್ಲರ್‌ಗೆ ಒಬ್ಬ ಗೋಬೆಲ್ಸ್ ಇದ್ದ. ಆದರೆ, ಬಿಜೆಪಿಯಲ್ಲಿ ಎಲ್ಲರೂ ಗೋಬೆಲ್ಸ್‌ಗಳೇ. ಅವರು ತಮ್ಮ ಇಚ್ಛೆಯಂತೆ ಯಾರ ವಿರುದ್ಧವೂ ಅಪಪ್ರಚಾರ ಮಾಡುತ್ತಾರೆ. ಯಾವುದೇ ಪುರಾವೆಗಳಿಲ್ಲದೇ, ಯಾವುದೇ ಆಧಾರವಿಲ್ಲದೇ ಸುಳ್ಳುಗಳನ್ನು ಹರಡುತ್ತಾರೆ. ಅವರಿಗೆ ತಿಳಿದಿರುವುದು ವಾಟ್ಸ್ಆ್ಯಪ್ ವಿಶ್ವವಿದ್ಯಾನಿಲಯ ಮತ್ತು ಸಾಮಾಜಿಕ ಮಾಧ್ಯಮ. ಇವುಗಳಿಂದ ಅವರು ಎಲ್ಲ ಸುಳ್ಳುಗಳನ್ನು ಹಬ್ಬಿಸಿ ಸತ್ಯವನ್ನೇ ಮರೆಮಾಚುತ್ತಾರೆ ಎಂದು ಆರೋಪಿಸಿದರು.
ಅವರ ಸುಳ್ಳಿನ ಬಲೂನಿಗೆ ಸತ್ಯದ ಸೂಜಿ ಚುಚ್ಚಿದಾಗ ಅವರು ಕೆರಳುತ್ತಾರೆ. ಬಿಜೆಪಿ ಮತ್ತು ತಮಿಳು ಜನರ ಶತ್ರುಗಳಾದ ಎಐಎಡಿಎಂಕೆಯನ್ನು ಎದುರಿಸುತ್ತಿದ್ದೇವೆ. ನಮ್ಮ ಹೋರಾಟ ಫ್ಯಾಸಿಸಂ ವಿರುದ್ಧ. ಜನರನ್ನು ಕೋಮುವಾದ ಮತ್ತು ಜಾತೀಯತೆಯ ಆಧಾರದ ಮೇಲೆ ವಿಭಜಿಸುವ ಮೂಲಕ, ರಾಷ್ಟ್ರವನ್ನು ಧ್ವಂಸ ಮಾಡುವ ಗುಂಪಿನ ವಿರುದ್ಧ ನಮ್ಮ ಹೋರಾಟ. ಬಿಜೆಪಿಯ ಫ್ಯಾಸಿಸಂ ಡಿಎಂಕೆ ಅಥವಾ ತಮಿಳುನಾಡಿಗೆ ಮಾತ್ರವಲ್ಲ, ಇಡೀ ಭಾರತ ಮತ್ತು ವಿಶ್ವಕ್ಕೆ ಬೆದರಿಕೆಯಾಗಿದೆ ಎಂದು ದೂಷಿಸಿದರು.
ಬಿಜೆಪಿ ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಾತ್ರವಲ್ಲದೇ, ಮಾಧ್ಯಮದ ವ್ಯಕ್ತಿಗಳಿಂದ ಹಿಡಿದು ಪ್ರಗತಿಪರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರವರೆಗೂ ಬೆದರಿಕೆ ಒಡ್ಡಿದ್ದಾರೆ. ನಾವು ಇದಕ್ಕೆ ಹೆದರಬಾರದು ಎಂದು ಅವರು ಸಾಮಾಜಿಕ ಮಾಧ್ಯಮ ತಂಡವನ್ನು ಹುರಿದುಂಬಿಸಿದರು.
ಪತ್ನಿ ದೇವಸ್ಥಾನ ಹೋದರೆ ತಪ್ಪಿಲ್ಲ: ಸ್ಟಾಲಿನ್ ಅವರ ಪತ್ನಿ ದೇವಸ್ಥಾನಗಳಿಗೆ ಹೋಗುತ್ತಿರುವುದನ್ನು ಪ್ರಶ್ನಿಸಿದ್ದ ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಸ್ಟಾಲಿನ್, ನನ್ನ ಪತ್ನಿ ಯಾವ ದೇವಸ್ಥಾನಕ್ಕೆ ಭೇಟಿ ನೀಡಿದರೂ ತಪ್ಪಿಲ್ಲ. ಆಕೆ ರಾಜ್ಯದ ಪ್ರತಿ ದೇವಸ್ಥಾನದಲ್ಲೂ ಪೂಜೆ ಸಲ್ಲಿಸುತ್ತಾರೆ. ಅದು ಅವರ ಆಸೆ ಮತ್ತು ನಾನು ಅದನ್ನು ತಡೆಯುವುದಿಲ್ಲ. ನಾವು ಆರ್ಯರ ಕಟು ಸಿದ್ಧಾಂತಗಳ ವಿರೋಧಿಗಳೇ ಹೊರತು ಅಧ್ಯಾತ್ಮದ ವಿರುದ್ಧ ಅಲ್ಲ ಎಂದು ಅವರು ಹೇಳಿದರು.
ದೇವಸ್ಥಾನ ಮತ್ತು ನಂಬಿಕೆ ವ್ಯಕ್ತಿಯ ಹಕ್ಕಿಗೆ ಸಂಬಂಧಿಸಿದ್ದು. ದೇಗುಲ ಪ್ರವೇಶಕ್ಕಾಗಿ ದ್ರಾವಿಡ ಚಳವಳಿಯೇ ನಡೆದಿದೆ. ದೇವಾಲಯಗಳ ಪ್ರವೇಶಕ್ಕಾಗಿ ಹೋರಾಟಗಳು ನಡೆದು, ಜನಸಾಮಾನ್ಯರಿಗೆ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ಪಡೆದುಕೊಳ್ಳಲಾಗಿದೆ. ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದರೂ, ಆಧ್ಯಾತ್ಮದ ವಿರುದ್ಧ ನಾವಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಸನಾತನ ಧರ್ಮದ ಕುರಿತ ವಿವಾದದ ಹಿಂದೆ ಬಿಜೆಪಿ ಕೈವಾಡವಿದೆ : ಹೈಕೋರ್ಟ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ