ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿಚಾರದಲ್ಲಿ ನಾವು ಟ್ವಿಟರ್ಗೆ ಯಾವುದೇ ರೀತಿಯ ರಕ್ಷಣೆ ನೀಡುವುದಿಲ್ಲ. ಕೇಂದ್ರ ಸರ್ಕಾರ ಟ್ವಿಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಕ್ತವಾಗಿದೆ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನುಸರಣೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಟ್ವಿಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಯಾವುದೇ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳಬಹುದು. ಟ್ವಿಟರ್ ಭಾರತದಲ್ಲಿ ಕಾರ್ಯಾಚರಣೆ ಮಾಡಬೇಕಾದರೆ, ಕೇಂದ್ರ ಸರ್ಕಾರದ ಕಾಯ್ದೆಗಳನ್ನು ಅನುಸರಿಸುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಟ್ವಿಟರ್ ಹೇಳಿದೆ.
ಒಂದು ತಿಂಗಳ ಕಾಲ ಸಾಮಾಜಿಕ ಮಾಧ್ಯಮಗಳು ಈ ಕಾಯ್ದೆಯನ್ನು ಪಾಲಿಸಬೇಕೆಂದು ನಿಯಮ ಮಾಡಲಾಗಿತ್ತು. ಎಲ್ಲಾ ಸಾಮಾಜಿಕ ಮಾಧ್ಯಮಗಳು ಕಾಯ್ದೆಯನ್ನು ಅನುಸರಿಸಿದ್ದು, ಸುಮಾರು 42 ದಿನಗಳಾದರೂ ಟ್ವಿಟರ್ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಪಾಲಿಸಲು ವಿಫಲವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದಾಗ ಹೈಕೋರ್ಟ್ ಈ ರೀತಿಯಾಗಿ ಅಭಿಪ್ರಾಯಪಟ್ಟಿದೆ.
ದೆಹಲಿ ಹೈಕೋರ್ಟ್ ಪೀಠದಲ್ಲಿದ್ದ ನ್ಯಾಯಮೂರ್ತಿ ರೇಖಾ ಪಲ್ಲಿ, ಟ್ವಿಟರ್ ಮಾಹಿತಿ ತಂತ್ರಜ್ಞಾನ ಕಾಯ್ದೆಗಳನ್ನು ಪಾಲಿಸುತ್ತದೆಯೋ? ಇಲ್ಲವೋ? ಎಂಬ ಬಗ್ಗೆ ಸ್ಪಷ್ಟ ನಿಲುವನ್ನು ತಿಳಿಸಬೇಕು ಎಂದು ಟ್ವಿಟರ್ ಪರ ವಕೀಲರಾದ ಸಜನ್ ಪೂವಯ್ಯ ಅವರಿಗೆ ಸೂಚನೆ ನೀಡಿದೆ. ಇದರ ಜೊತೆಗೆ ಕುಂದುಕೊರತೆ ಅಧಿಕಾರಿ ನೇಮಕದ ವಿಚಾರವಾಗಿ ಮಾತ್ರವಲ್ಲದೇ ಕಾಯ್ದೆಯ ಎಲ್ಲಾ ವಿಚಾರದಲ್ಲೂ ಸ್ಪಷ್ಟವಾಗಿರುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಡಿಲಿಮಿಟೇಷನ್ ಪ್ರಕ್ರಿಯೆಯಿಂದ ಹೊರಗುಳಿಯಲು ಪಿಡಿಪಿ ನಿರ್ಧಾರ: ಕಗ್ಗಂಟಾಗುತ್ತಾ ಮಹತ್ವದ ಕಾರ್ಯ?
ಕುಂದುಕೊರತೆ ಅಧಿಕಾರಿಯ ನೇಮಕ ಮಾಡಲು ಟ್ವಿಟರ್ ಇಷ್ಟು ಸಮಯ ತೆಗೆದುಕೊಳ್ಳಲು ಕಾರಣವೇನು? ಎಂದು ಪ್ರಶ್ನಿಸಿದ ಹೈಕೋರ್ಟ್ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಭಾರತದಲ್ಲಿ ಟ್ವಿಟರ್ ಉಳಿಯುವುದಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಜುಲೈ 8ಕ್ಕೆ ವಿಚಾರಣೆ ಮುಂದೂಡಿದೆ.