ಬಿಸ್ವಾನಾಥ್ (ಅಸ್ಸೋಂ): ತ್ರಿಪುರದ ಬಳಿಕ ಅಸ್ಸೋಂ ಮತ್ತು ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಅಸ್ಸೋಂ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ರಾಜನಾಥ್ ಸಿಂಗ್, ಬಿಸ್ವಾನಾಥ್ನಲ್ಲಿಂದು ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ತ್ರಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸಿಯಾಗಿದೆ. ನಿಮ್ಮ ಆಶೀರ್ವಾದದಿಂದ ಅಸ್ಸೋಂ ಮತ್ತು ಪಶ್ಚಿಮ ಬಂಗಾಳದಲ್ಲೂ ನಮ್ಮ ಸರ್ಕಾರ ರಚಿಸಲು ಹೊರಟಿದ್ದೇವೆ.
ಈ ರಾಜ್ಯಗಳ ಗಡಿಗಳು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿವೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಭಾರತದಲ್ಲಿ ಬಾಂಗ್ಲಾದೇಶಿಗರ ಪ್ರವೇಶವನ್ನು ನಿಲ್ಲಿಸಲು ನಾವು ಗಡಿ ನಿರ್ಬಂಧ ಹೇರುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪ ತಳ್ಳಿ ಹಾಕಿದ ಚುನಾವಣಾ ಆಯೋಗ
ಅಸ್ಸೋಂ ರಾಜ್ಯದ ಗೌರವವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿಯೇ ನಾವು ಸಂಗೀತ ಮಾಂತ್ರಿಕ ಭೂಪನ್ ಹಜಾರಿಕಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಿ ಗೌರವಿಸಿದ್ದೇವೆ ಎಂದು ಸಿಂಗ್ ಹೇಳಿದರು.
2018ರಲ್ಲಿ ತ್ರಿಪುರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 20 ವರ್ಷಗಳ ಕಾಲ ರಾಜ್ಯವನ್ನಾಳಿದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಸಿಪಿಐ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ಬಂದು ಇತಿಹಾಸ ಬರೆದಿತ್ತು. ಇದೀಗ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ ಅಸ್ಸೋಂ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಗೆಲ್ಲುವ ವಿಶ್ವಾಸ ಹೊಂದಿದೆ.