ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಶುಕ್ರವಾರ ಬೆಳಗ್ಗೆಯಿಂದ ಆರಂಭವಾಗಿ 26 ಗಂಟೆಗಳ ಕಾಲ ನಡೆದ ಮ್ಯಾರಥಾನ್ ವಿಚಾರಣೆಯ ನಂತರ ಚಟರ್ಜಿಯ ಬಂಧನವಾಗಿದೆ.
ಪಾರ್ಥ ಚಟರ್ಜಿ ಅವರನ್ನು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಅವರ ಮನೆಯಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶನಿವಾರ ಬೆಳಗ್ಗೆವರೆಗೂ ಮುಂದುವರೆದಿದೆ. ಚಟರ್ಜಿ ಅವರಿಗೆ ಆಪ್ತರಾಗಿರುವ ಅರ್ಪಿತಾ ಮುಖರ್ಜಿ ಅವರ ದಕ್ಷಿಣ ಕೋಲ್ಕತ್ತಾದಲ್ಲಿರುವ ನಿವಾಸದಿಂದ ಇಡಿ ಅಧಿಕಾರಿಗಳು 20 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣ ನಡೆದಾಗ ಪಾರ್ಥ ಚಟರ್ಜಿ ರಾಜ್ಯದ ಶಿಕ್ಷಣ ಸಚಿವರಾಗಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಶಂಕಿತರ ವಿರುದ್ಧ ಅಕ್ರಮ ಹಣ ಸಾಗಣೆಯ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣವು, ಇಡಿ ನಡೆಸುತ್ತಿರುವ ದೀರ್ಘಾವಧಿಯ ತನಿಖೆಯೊಂದಾಗಿದೆ. ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಾರ್ಥ ಚಟರ್ಜಿ ಇಡಿ ಯಿಂದ ಸತತವಾಗಿ ವಿಚಾರಣೆ ಎದುರಿಸುತ್ತಿರುವಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದ್ಯ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರಾಗಿರುವ ಪಾರ್ಥ ಚಟರ್ಜಿ ಅವರ ದಕ್ಷಿಣ ಕೋಲ್ಕತ್ತಾದಲ್ಲಿನ ನಕ್ತಾಲದಲ್ಲಿರುವ ಮನೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ಇಡಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದು, ಶನಿವಾರವೂ ಮುಂದುವರೆದಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಟರ್ಜಿ ಉಸಿರಾಟ ಸಮಸ್ಯೆ ಹಾಗೂ ಇನ್ನೂ ಕೆಲ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಸಚಿವರ ಸಹಾಯಕನ ಮೂಲಕ ವೈದ್ಯರನ್ನು ಕರೆಸಿದ ಇಟಿ ಅಧಿಖಾರಿಗಳು ಚಟರ್ಜಿ ಅವರನ್ನು ತಪಾಸಣೆಗೊಳಪಡಿಸಿದ್ದರು.
ಕೂಡಲೇ ಸ್ಥಳಕ್ಕಾಗಮಿಸಿದ ವೈದ್ಯರ ತಂಡ ಸಚಿವರನ್ನು ಪರಿಶೀಲಿಸಿ ಅವರಿಗೆ ಔಷಧಿ ಮಾತ್ರೆ ನೀಡಿತ್ತು. ಕೆಲ ಹೊತ್ತಿನ ನಂತರ ಸಚಿವರು ಒಂದಿಷ್ಟು ಚೇತರಿಸಿಕೊಂಡಿದ್ದು, ಅವರಿಗೆ ಇಸಿಜಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇಷ್ಟಾದರೂ ಸಚಿವರ ಮನೆಯಲ್ಲಿ ತನಿಖಾ ಕಾರ್ಯವನ್ನು ಇಡಿ ಅಧಿಕಾರಿಗಳು ಮುಂದುವರಿಸಿದ್ದಾರೆ. ಈ ಮಧ್ಯೆ ವೈದ್ಯರ ತಂಡವು ಮನೆಯಲ್ಲೇ ಇರುವಂತೆ ನೋಡಿಕೊಳ್ಳಲಾಗಿದೆ.
ಇದನ್ನೂ ಓದಿ: ಚುನಾವಣೆಗೂ ಮುನ್ನವೇ ನಾನು ಸಿಎಂ ಎಂದು ಹೇಳುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ