ಹಜಾರಿಬಾಗ್(ಜಾರ್ಖಂಡ್): ಮಹಿಳೆಯರು ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುವುದನ್ನು ಅನೇಕ ಬಾರಿ ರುಜುವಾತು ಮಾಡಿದ್ದಾರೆ. ಜಾರ್ಖಂಡ್ನ ಹಜಾರಿಬಾಗ್ನ ಮಹಿಳೆಯರು ಇದಕ್ಕೆ ಹೊಸ ಸೇರ್ಪಡೆಯಂತಿದ್ದು, 800 ಜನ ಗುಂಪು ಕಲ್ಲಂಗಡಿ ಕೃಷಿಯಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಇವರು 200 ಎಕರೆಯಲ್ಲಿ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಚುರ್ಚು ನಾರಿ ಎನರ್ಜಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯಡಿ ಎಲ್ಲ 800 ಮಹಿಳೆಯರು ಕಲ್ಲಂಗಡಿ ಕೃಷಿ ಮಾಡಿದ್ದಾರೆ. ಈ ಸಾಲಿನಲ್ಲಿ 25 ರಿಂದ 30 ಲಕ್ಷ ರೂ. ಮೌಲ್ಯದ ಕಲ್ಲಂಗಡಿ ಮಾರಾಟ ಮಾಡುವ ಗುರಿ ಹೊಂದಿದ್ದು, ಈಗಾಗಲೇ 17 ಲಕ್ಷ ರೂ. ಮೌಲ್ಯದ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಇವರು ಬೆಳೆದ ಬೆಳೆ ಜಾರ್ಖಂಡ್ ಮಾತ್ರವಲ್ಲದೇ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದ ಮಾರುಕಟ್ಟೆಯನ್ನೂ ತಲುಪಿವೆ.
ಬಂಜರು ಭೂಮಿಯಲ್ಲಿ ಯಶಸ್ವಿ ಕೃಷಿ: ಕೃಷಿಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿರುವ ಮಹಿಳೆಯರು, ಬಂಜರು ಭೂಮಿಯಲ್ಲಿ ಯಶಸ್ವಿಯ ಕೃಷಿ ಮಾಡಿದ್ದಾರೆ. ಏನನ್ನೂ ಬೆಳೆಯಲು ಸಾಧ್ಯವಿಲ್ಲ ಎಂಬಂತಹ ಭೂಮಿಯಲ್ಲಿ ಇವರು ಲಾಭದಾಯಕ ಫಸಲು ತೆಗೆದು, ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ಮಹಿಳೆಯರ ಈ ಕೃಷಿ ಸಾಧನೆ ಕಂಡು ಇತರೆ ಸಂಘ-ಸಂಸ್ಥೆಗಳು ಕೂಡ ನೆರವಿಗೆ ಬರುತ್ತಿವೆ.
ನೆಮ್ಮದಿಯ ಜೀವನ: ಎಲ್ಲ ಮಹಿಳೆಯರು ಮಧ್ಯಮ ವರ್ಗದವರೇ ಆಗಿದ್ದು, ಕೃಷಿ ಕಾಯಕದಿಂದ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಕೆಲವರು ಹೊಸ ಮನೆಯನ್ನು ಕಟ್ಟಿಸಿಕೊಂಡು ಖುಷಿಯಾಗಿದ್ದಾರೆ. ಅಲ್ಲದೇ, ಕೃಷಿ ಇಷ್ಟೊಂದು ಲಾಭದಾಯಕವಲ್ಲ ಎಂಬ ಸಾಮಾನ್ಯ ಅಭಿಪ್ರಾಯವನ್ನು ಇವರು ಹೊಂದಿದ್ದರು. ಆದರೆ, ಈಗ ಪ್ರತಿಯೊಬ್ಬ ಮಹಿಳೆಯರು ಕೈ ತುಂಬ ಹಣವನ್ನೂ ನೋಡುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ 200 ಮಹಿಳೆಯರು ಕೃಷಿಯಲ್ಲಿ ತೊಡಗಿಸಿ ನಿರೂಪಿಸಿದ್ದು, ಮಹಿಳೆಯರು ಸಾಂಘಿಕವಾಗಿ ಕೃಷಿ ಮಾಡುತ್ತಿರುವ ಮೊದಲು ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: 58ನೇ ವಯಸ್ಸಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಶಾಸಕ