ಲಖನೌ(ಉತ್ತರ ಪ್ರದೇಶ): ದೇಶವು ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸಲು ಬಯಸಿದ್ದು, ಯಾರ ಮೇಲೂ ದಾಳಿ ಮಾಡುವ ಉದ್ದೇಶಕ್ಕಲ್ಲ. ಭಾರತದ ಮೇಲೆ ಯಾವುದೇ ದೇಶದ ಕೆಟ್ಟ ಕಣ್ಣು ಬೀಳದೇ ಇರಲಿ ಎಂಬ ಕಾರಣಕ್ಕೆ ಬ್ರಹ್ಮೋಸ್ ಕ್ಷಿಪಣಿ ತಯಾರಿಸುತ್ತಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖನೌನಲ್ಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕ ಮತ್ತು ಡಿಆರ್ಡಿಒ ಲ್ಯಾಬ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ದೇಶದ ಮೇಲೆ ದಾಳಿ ಮಾಡುವುದು ಅಥವಾ ಯಾವುದೇ ದೇಶದ ಒಂದು ಇಂಚು ಭೂಮಿಯನ್ನು ಆಕ್ರಮಿಸುವುದನ್ನು ಭಾರತ ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಶ್ವದ ಯಾವುದೇ ದೇಶವು ನಮ್ಮ ಮೇಲೆ ದಾಳಿ ಮಾಡದಂತಿರಲು ಭಾರತವು ಪರಮಾಣು ನಿರೋಧಕ ಶಸ್ತ್ರಗಳನ್ನು ಹೊಂದಿರಬೇಕು. ಆದ್ದರಿಂದ ನಾವು ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುತ್ತಿದ್ದೇವೆ ಎಂದಿರುವ ರಾಜನಾಥ ಸಿಂಗ್ ನಾವು ಯಾರನ್ನೂ ಪ್ರಚೋದಿಸುವುದಿಲ್ಲ. ಪ್ರಚೋದನೆ ಮಾಡುವವರನ್ನು ಬಿಡುವುದಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
Rajnath Singh on Pakistan: ನೆರೆಯ ರಾಷ್ಟ್ರವಾಗಿ ಭಾರತದಿಂದ ಬೇರ್ಪಟ್ಟ ರಾಷ್ಟ್ರವೊಂದಿದೆ. ಭಾರತದ ವಿರುದ್ಧ ಯಾವಾಗಲೂ ಅದು ಕಿಡಿಕಾರುತ್ತಿದ್ದು, ಯಾಕೆ ಎಂಬುದು ನನಗೆ ತಿಳಿದಿಲ್ಲ. ಅನೇಕ ಭಯೋತ್ಪಾದನಾ ಕೃತ್ಯಗಳನ್ನು ಮಾಡಿದೆ ಎಂದು ಪಾಕಿಸ್ತಾನಕ್ಕೆ ರಾಜನಾಥ ಸಿಂಗ್ ಪರೋಕ್ಷವಾಗಿ ತಿವಿದರು.
ಪ್ರಧಾನಿ ಮೋದಿಯವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಅದೇ ದೇಶದೊಳಗೆ ನುಗ್ಗಿ ಭಯೋತ್ಪಾದಕರ ಅಡಗುದಾಣಗಳನ್ನು ನಾಶಪಡಿಸಿದ್ದೇವೆ. ಅಗತ್ಯಬಿದ್ದಾಗ ವೈಮಾನಿಕ ದಾಳಿಯನ್ನೂ ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.
Rajnath Singh on UP CM: ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕ ಮತ್ತು ಡಿಆರ್ಡಿಒ ಲ್ಯಾಬ್ ಸ್ಥಾಪನೆಗೆ ಜಾಗ ಬೇಕೆಂದು ಕೇಳಿದಾಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಶೀಘ್ರವೇ ಭೂಮಿ ಲಭ್ಯವಾಗುವಂತೆ ಮಾಡಿದ್ದಾರೆ. ಕೇವಲ ಒಂದೂವರೆ ತಿಂಗಳಲ್ಲಿ 200 ಎಕರೆ ಲಭ್ಯವಾಗುವಂತೆ ಮಾಡಿದ ಅವರಿಗೆ ಧನ್ಯವಾದಗಳು ಎಂದು ರಾಜನಾಥ್ ಸಿಂಗ್ ಕೃತಜ್ಞತೆ ಸಲ್ಲಿಸಿದ್ದಾರೆ.
ಭದ್ರತಾ ದೃಷ್ಟಿಯಿಂದ ಈ ಯೋಜನೆಗಳು ಮುಖ್ಯವಾಗಿದ್ದು, ರಕ್ಷಣಾ ಉತ್ಪಾದನಾ ಘಟಕಗಳ ವಿಷಯದಲ್ಲಿ ಉತ್ತರ ಪ್ರದೇಶ ವಿಶೇಷ ಸ್ಥಾನ ಪಡೆಯಲು ಸಾಧ್ಯವಾಗಲಿದೆ. ಲಖನೌ ಮತ್ತು ಯುಪಿಯಲ್ಲಿ ವಾಸಿಸುವ ಜನರಿಗೆ ಉದ್ಯೋಗಗಳನ್ನು ಈ ಯೋಜನೆ ಒದಗಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಯುಪಿ ಸಿಎಂ ಈ ವಿಚಾರದಲ್ಲಿ ಜಿಪುಣರು!
ಅಪರಾಧಿಗಳ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತೆಗೆದುಕೊಂಡ ಕಠಿಣ ಕ್ರಮವನ್ನು ಶ್ಲಾಘಿಸಿದ ಅವರು ಯೋಗೀಜಿ ಅವರು ಎಲ್ಲದರಲ್ಲೂ ವಿಶಾಲ ಹೃದಯದವರು. ಆದರೆ ಮಾಫಿಯಾ ವಿಚಾರದಲ್ಲಿ ಅವರು ಜಿಪುಣರಾಗಿದ್ದು, ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು ಅವೈಜ್ಞಾನಿಕ: ಏಮ್ಸ್ನ ಹಿರಿಯ ತಜ್ಞ