ಲಖನೌ, ಉತ್ತರ ಪ್ರದೇಶ: ಇಂದು ಆರನೇ ಹಂತದ ಮತದಾನ ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರ ಭವಿಷ್ಯ ನಿರ್ಧಾರಗುತ್ತಿದೆ. ಒಟ್ಟು 57 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್ ಆಗುತ್ತಿದ್ದು, ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ನ ಅಜಯ್ ಕುಮಾರ್ ಲಾಲು ಹಾಗೂ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಅವರ ಭವಿಷ್ಯ ಮತ ಪೆಟ್ಟಿಗೆ ಸೇರುತ್ತಿದೆ.
ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡಿದ್ದು, ಮತದಾನದ ನಂತರ ಮಾತನಾಡಿದ ಅವರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿ ದಾಖಲೆ ಮಾಡಲಿದೆ ಮತ್ತು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಶೇಕಡಾ 80ರಷ್ಟು ಸೀಟುಗಳನ್ನು ನಾವು ಗೆಲ್ಲುತ್ತೇವೆ. ಅಭಿವೃದ್ಧಿ ಮತ್ತು ಭದ್ರತೆಗಾಗಿ ಜನರು ನಮಗೆ ಮತ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಮಾತನಾಡಿ, ಗೋರಖ್‌ಪುರದಲ್ಲಿರುವ ಎಲ್ಲ 9 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗ ಉತ್ತರ ಪ್ರದೇಶದ ಜನರು ಇಲ್ಲಿ ರಾಮರಾಜ್ಯ ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆ: ಹಕ್ಕು ಚಲಾಯಿಸಿ ಈ ವಿಶ್ವಾಸ ವ್ಯಕ್ತಪಡಿಸಿದ ಯೋಗಿ ಆದಿತ್ಯನಾಥ!
ಚುನಾವಣೆ ಬಗ್ಗೆ ಲಖನೌದಲ್ಲಿ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಬಿ.ಡಿ.ರಾಮ್ ತಿವಾರಿ ರಾಜ್ಯದ 10 ಜಿಲ್ಲೆಗಳಲ್ಲಿ 6ನೇ ಹಂತದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಇವಿಎಂ ಸಂಬಂಧಿತ ದೂರುಗಳನ್ನು ತಕ್ಷಣವೇ ಪರಿಹರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಬಿರುಸಾಗಿ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೆ ಶೇಕಡಾ 21.79ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ನಡುವೆ ಬಿಎಸ್ಪಿ ವರಿಷ್ಠೆ ಮಾಯಾವತಿ, ಮತದಾರರು, ಹಕ್ಕು ಚಲಾಯಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕು ಎಂದು ಕರೆ ನೀಡಿದ್ದಾರೆ.