ನವದೆಹಲಿ: ಇಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದೆ. ದೇಶದ ಸುಮಾರು 4,800 ಚುನಾಯಿತ ಸಂಸದರು ಮತ್ತು ವಿಧಾನಸಭೆಗಳ ಶಾಸಕರು 16ನೇ ರಾಷ್ಟ್ರಪತಿ ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಒಗ್ಗಟ್ಟಿನ ಆಯ್ಕೆಯಾದ ಯಶವಂತ್ ಸಿನ್ಹಾ ನಡುವೆ ಪೈಪೋಟಿ ಏರ್ಪಟ್ಟಿದೆ.
ಮುರ್ಮು ಬೆಂಬಲಿಸುವವರು: ಜಾರ್ಖಂಡ್‌ನ ಮಾಜಿ ಗವರ್ನರ್ ಮುರ್ಮು ಅವರಿಗೆ ಹಲವಾರು ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುವುದಾಗಿ ಈಗಾಗಲೇ ಭರವಸೆ ನೀಡಿವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ-ಸೆಕ್ಯುಲರ್ (ಜೆಡಿ-ಎಸ್), ಶಿರೋಮಣಿ ಅಕಾಲಿದಳ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಎಐಎಡಿಎಂಕೆ, ಟಿಡಿಪಿ, ವೈಎಸ್ಆರ್ಸಿಪಿ ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಬೆಂಬಲ ನೀಡುವುದಾಗಿ ಘೋಷಿಸಿವೆ.
ಸಿನ್ಹಾಗೆ ಯಾರ್ಯಾರ ಬೆಂಬಲ?: ಅವರಿಗೆ ಕಾಂಗ್ರೆಸ್, ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ), ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಅಖಿಲೇಶ್ ಯಾದವ್ ನೇತೃತ್ವದ-ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಬೆಂಬಲಿಸುತ್ತಿವೆ. ಎಐಎಂಐಎಂ, ರಾಷ್ಟ್ರೀಯ ಜನತಾ ದಳ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷಗಳು ವಿರೋಧ ಪಕ್ಷದ ಪಟ್ಟಿಗೆ ಸೇರ್ಪಡೆಯಾಗಿದೆ.
ಎನ್‌ಡಿಎ ಅಭ್ಯರ್ಥಿಯ ಗೆಲುವು ನಿಶ್ಚಿತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇಕಡಾ 60 ರಷ್ಟು ಮತಗಳನ್ನು ಪಡೆದು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಸೋಲಿಸುವ ಸಾಧ್ಯತೆ ದಟ್ಟವಾಗಿದೆ.
ಮತದಾನ ಪ್ರಕ್ರಿಯೆಯ ಮಾಹಿತಿ:
- ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಂಸತ್ ಭವನ ಮತ್ತು ವಿಧಾನ ಸಭೆಗಳ ಆವರಣಗಳಲ್ಲಿ ಮತದಾನ ನಡೆಯಲಿದೆ.
- ಗೌಪ್ಯ ಮತದಾನದ ವ್ಯವಸ್ಥೆ ಅನುಸರಿಸಲಾಗುತ್ತಿದೆ. ಮತದಾನಕ್ಕೆ ಸಂಬಂಧಿಸಿದಂತೆ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರಿಗೆ ವಿಪ್ ನೀಡುವಂತಿಲ್ಲ.
- ಮತದಾರರು ಮತದಾನಕ್ಕಾಗಿ ಮತಪತ್ರವನ್ನು ಪಡೆಯುವ ಸಂದರ್ಭದಲ್ಲಿ ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಬೇಕು. ಮತಪತ್ರ ಪಡೆದ ನಂತರ ಸದಸ್ಯರು ಮತದಾನ ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿರುವ ಮತಗಟ್ಟೆ ಅಧಿಕಾರಿಯಿಂದ ಮತಪತ್ರ ಪಡೆಯಬೇಕು. ನಂತರ ಮತದಾರರು ಕೂಡಲೇ ಮತ ಚಲಾಯಿಸುವ ಕಂಪಾರ್ಟಮೆಂಟ್ ಬಳಿಗೆ ಹೋಗಿ ಮತದಾನ ಮಾಡಬೇಕು.
- ಮತದಾನದ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಸಹಾಯಕ ಚುನಾವಣಾಧಿಕಾರಿಗಳು ಒದಗಿಸುವ ನೇರಳೆ ಶಾಯಿಯ ಪೆನ್ ಅನ್ನೇ ಮತ ಗುರುತಿಸಲು ಉಪಯೋಗಿಸಬೇಕು.
- ಲೇಖನಿಯ ಬದಲಾಗಿ ಬೇರಾವುದೇ ಲೇಖನಿಯನ್ನು ಉಪಯೋಗಿಸಿದ್ದಲ್ಲಿ ಆ ಮತಪತ್ರವು ಅಸಿಂಧುವಾಗಲಿದೆ.
- ಶಾಸಕರು ಮತವನ್ನು ಗೌಪ್ಯವಾಗಿಡುವ ಸಲುವಾಗಿ ಮತಪತ್ರವನ್ನು ಪೋಲ್ಡ್ ಮಾಡಬೇಕು. ಪೋಲ್ಡ್ ಮಾಡಿದ ಮತಪತ್ರವನ್ನು ಮತ ಪೆಟ್ಟಿಗೆಯೊಳಗೆ ಹಾಕಬೇಕು.
- ಚು.ಆಯೋಗದ ನಿರ್ದೇಶನದ ಪ್ರಕಾರ, ಸಂಸದರು ಹಸಿರು ಬಣ್ಣದ ಮತಪತ್ರವನ್ನು ಪಡೆದರೆ, ಶಾಸಕರು ತಮ್ಮ ಮತ ಚಲಾಯಿಸಲು ಗುಲಾಬಿ ಬಣ್ಣದ ಮತಪತ್ರವನ್ನು ಪಡೆಯುತ್ತಾರೆ.
- ಸಂಸತ್ತಿನ ಸದಸ್ಯರ ಮತದ ಮೌಲ್ಯವು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಪ್ರತಿ ಶಾಸಕರ ಮತದ ಮೌಲ್ಯವು 208 ರಷ್ಟಿದೆ. ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ 176 ರಷ್ಟಿದೆ.
- ಕರ್ನಾಟಕ ರಾಜ್ಯದ ಒಬ್ಬ ಶಾಸಕನ ಮತಮೌಲ್ಯ 131. ರಾಜ್ಯದಲ್ಲಿ 224 ಶಾಸಕರಿದ್ದಾರೆ. ಅದರಂತೆ ರಾಜ್ಯದ ಒಟ್ಟು ಮತಮೌಲ್ಯ 29,344.
- ಸಂಸದರ ಮತಮೌಲ್ಯ 700 ಆಗಿರಲಿದೆ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಪ್ರಸ್ತುತ 776 ಸಂಸದರು ಇದ್ದಾರೆ. ಪ್ರತಿ ಸಂಸದರ ಮತಮೌಲ್ಯ 700 ಆಗಿದೆ. ಈ ಮತಮೌಲ್ಯ ರಾಜ್ಯದ ಎಲ್ಲಾ ಸಂಸದರಿಗೆ ಸಮಾನವಾಗಿರುತ್ತದೆ.
- ಭಾರತದ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಜುಲೈ 21 ರಂದು ಹೊರಬೀಳಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ನಾಳೆ ರಾಷ್ಟ್ರಪತಿ ಚುನಾವಣೆ.. ಮತದಾನದ ತರಬೇತಿ ಪಡೆದ ಬಿಜೆಪಿ ನಾಯಕರು