ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಇನ್ನು ಮುಂದೆ ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಕ್ಲಿಕ್ ಮಾಡುವಂತಿಲ್ಲ. ಕೇದಾರನಾಥ ದೇಗುಲದೊಳಗೆ ಮಹಿಳೆಯೊಬ್ಬರು ಶಿವಲಿಂಗದ ಮೇಲೆ ನೋಟುಗಳನ್ನು ಸುರಿಸುತ್ತಿರುವುದು, ಬಾಲಕಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡುವುದು ಮತ್ತು ಅಧಿಕಾರಿಗಳು ಆಕ್ಷೇಪಾರ್ಹವೆಂದು ಭಾವಿಸಿದ ಹಲವಾರು ಚಟುವಟಿಕೆಗಳನ್ನು ತೋರಿಸುವ ವೈರಲ್ ವಿಡಿಯೋಗಳ ಸರಣಿಯನ್ನು ಗಂಭೀರವಾಗಿ ಪರಿಗಣಿಸಿ, ಬದ್ರಿ ಕೇದಾರ ದೇವಾಲಯ ಸಮಿತಿಯು ಈ ಚಟುವಟಿಕೆಗಳ ಮೇಲೆ ನಿಷೇಧ ಹೇರಿದೆ.
ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಂದ ಎಚ್ಚರಿಕೆ: ದೇವಾಲಯದ ಒಳಗೆ ಯಾವುದೇ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಗೆ ಅವಕಾಶವಿಲ್ಲ ಎಂಬ ಸಂದೇಶದೊಂದಿಗೆ ದೇವಾಲಯದ ಸಮಿತಿಯು ಆವರಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಬೋರ್ಡ್‌ಗಳನ್ನು ಹಾಕಿದೆ. ಇಂತಹ ಚಟುವಟಿಕೆಗಳಲ್ಲಿ ಯಾರೇ ಹೊಣೆಗಾರರಾದರೂ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದಲ್ಲದೇ ದೇವಸ್ಥಾನದ ಆವರಣದಲ್ಲಿ ಸಭ್ಯ ವಸ್ತ್ರಗಳನ್ನು ಧರಿಸುವಂತೆ ದೇವಸ್ಥಾನ ಸಮಿತಿ ವತಿಯಿಂದ ಧಾಮದಲ್ಲಿ ಬೋರ್ಡ್ ಕೂಡ ಹಾಕಲಾಗಿದೆ.
ದೇವಸ್ಥಾನದ ಆವರಣದಲ್ಲಿ ಬಾಯ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ್ದ ಹುಡುಗಿ: ಇದಕ್ಕೂ ಮುನ್ನ ಮಹಿಳೆಯೊಬ್ಬರು ಗರ್ಭಗುಡಿಯಲ್ಲಿ ನೋಟುಗಳ ಸುರಿಮಳೆಗೈದ ವಿಡಿಯೋ ಕೋಲಾಹಲ ಸೃಷ್ಟಿಸಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ದೇವಸ್ಥಾನದ ಆವರಣದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ್ದಳು. ಈ ವಿಡಿಯೋಗಳು ವೈರಲ್ ಆದ ನಂತರ ಜನರು ಕೋಪದಿಂದ ಪ್ರತಿಕ್ರಿಯಿಸಿದ್ದರು ಮತ್ತು ಇಂತಹ ಘಟನೆಗಳಲ್ಲಿ ಅಧಿಕಾರಿಗಳ ಉದಾಸೀನತೆಯನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ: ಚಾರ್ಧಾಮ್ ಯಾತ್ರೆ 2023: ಉಖಿಮಠದಿಂದ ಕೇದಾರನಾಥ ದೇವಸ್ಥಾನಕ್ಕೆ ಡೋಲಿ ಯಾತ್ರೆ
ಸಭ್ಯ ಬಟ್ಟೆ ಧರಿಸಿಯೇ ದೇವಸ್ಥಾನದ ಆವರಣ ಪ್ರವೇಶಿಸುವಂತೆ ಬೋರ್ಡ್: ದೇವಸ್ಥಾನ ಸಮಿತಿಯವರು ಪೊಲೀಸರಿಗೆ ಪತ್ರ ಬರೆದು ಇಂತಹ ಅನಾಹುತ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದೀಗ ಕೇದಾರನಾಥ ದೇಗುಲದ ಆವರಣದಲ್ಲಿ ಬಿಕೆಟಿಸಿ ದಪ್ಪ ಅಕ್ಷರಗಳಲ್ಲಿ ಬೋರ್ಡ್‌ಗಳನ್ನು ಹಾಕಿದೆ. ಇದರಲ್ಲಿ ಸಭ್ಯ ಬಟ್ಟೆ ಧರಿಸಿಯೇ ದೇವಸ್ಥಾನದ ಆವರಣ ಪ್ರವೇಶಿಸಬೇಕು ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ದೇವಸ್ಥಾನದ ಒಳಗೆ ಮೊಬೈಲ್ ಕೊಂಡೊಯ್ಯುವುದನ್ನು ಈಗಾಗಲೇ ನಿಷೇಧಿಸಲಾಗಿದೆ. ಆದರೆ, ಅನೇಕರು ದೇವಾಲಯದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುತ್ತಿರುವುದಲ್ಲದೇ, ಗರ್ಭಗುಡಿಯ ಫೋಟೋಗಳನ್ನು ತೆಗೆದುಕೊಂಡು ರೀಲ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ
ಸಂಪ್ರದಾಯ ಮನೋಭಾವಕ್ಕೆ ಧಕ್ಕೆ: ದೇವಸ್ಥಾನದ ಆವರಣದಲ್ಲಿ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳನ್ನು ಮಾಡುವುದಕ್ಕೆ ಸರಿಯಾದ ನಿಯಮಗಳನ್ನು ಮಾಡಬೇಕು ಎಂದು ಬದ್ರಿ-ಕೇದಾರ ದೇವಸ್ಥಾನ ಸಮಿತಿಯನ್ನು ಚಾರ್ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಮತ್ತು ಹಿರಿಯ ಯಾತ್ರಾರ್ಥಿ ಪುರೋಹಿತ್ (ಜುಲೈ 4-2023) ದೂಷಿಸಿದ್ದರು. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದರಿಂದ ಧಾರ್ಮಿಕ ಮನೋಭಾವಕ್ಕೆ ಧಕ್ಕೆಯಾಗುತ್ತದೆ. ಬದರಿ-ಕೇದಾರ ದೇವಸ್ಥಾನ ಸಮಿತಿ ಈ ಕುರಿತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಕೇದಾರನಾಥ ದೇವಾಲಯದ ಪ್ರಾಂಗಣದಲ್ಲಿ ಲವ್ ಪ್ರಪೋಸ್.. ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬರ್ ನಡೆಗೆ ವಿರೋಧ