ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು) ಕ್ಯಾಂಪಸ್‌ನಲ್ಲಿ ರವಿವಾರ ಮಾಂಸಾಹಾರ ವಿಷಯಕ್ಕೆ ಎಬಿವಿಪಿ ಮತ್ತು ಎಡ ಪಂಥೀಯ ಗುಂಪುಗಳ ನಡುವೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಯ ಆಡಳಿತ ಮಂಡಳಿ ಹೊಸ ಆದೇಶ ಹೊರಡಿಸಿದೆ. ಕ್ಯಾಂಪಸ್‌ನಲ್ಲಿ ಯಾವುದೇ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ರಾಮನವಮಿಯ ದಿನವಾದ ರವಿವಾರ ಕಾವೇರಿ ಹಾಸ್ಟೆಲ್ನಲ್ಲಿ ಮಾಂಸಾಹಾರ ಸೇವಿಸಿದ ವಿಷಯವಾಗಿ ಗುಂಪು ಘರ್ಷಣೆ ನಡೆದಿತ್ತು. ಒಂದು ಗುಂಪು ಮಾಂಸಾಹಾರ ಪರ, ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿತ್ತು. ಇದು ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದು, ಆರು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದರಿಂದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.
ಹಿಂಸಾಚಾರ ಸಹಿಸುವುದಿಲ್ಲ: ಕಾವೇರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಗುಂಪುಗಳ ಮಧ್ಯೆ ಜರುಗಿದ ಗಲಾಟೆಯನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ, ಕುಲಪತಿ ಮತ್ತು ಹಿರಿಯ ಅಧಿಕಾರಿಗಳು ಹಾಸ್ಟೆಲ್ಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕ್ಯಾಂಪಸ್‌ನಲ್ಲಿ ಯಾವುದೇ ಹಿಂಸಾಚಾರವನ್ನು ಸಹಿಸುವುದಿಲ್ಲ ಮತ್ತು ವಿದ್ಯಾರ್ಥಿಗಳು ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಿಕೊಳ್ಳಬೇಕೆಂದು ಕುಲಪತಿ ಸೂಚಿಸಿದ್ದಾರೆ ಎಂದು ವಿವಿಯ ಕುಲಸಚಿವರು ತಿಳಿಸಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ : ಹಾಸ್ಟೆಲ್ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ವಾರ್ಡನ್ಗಳಿಗೆ ಸೂಚಿಸಿದ್ದಾರೆ. ಜತೆಗೆ ಇಂತಹದ್ದು ಮರುಕಳಿಸದಂತೆ ನಿಗಾವಹಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದ ತಕ್ಷಣದ ವರದಿಯನ್ನು ಆಡಳಿತ ಮಂಡಳಿಗೆ ಸಲ್ಲಿಸಬೇಕೆಂದು ಭದ್ರತೆಯವರಿಗೂ ನಿರ್ದೇಶನ ಮಾಡಲಾಗಿದೆ. ಇನ್ಮುಂದೆ ಯಾರಾದರೂ ಶಾಂತಿ ಮತ್ತು ಸೌಹಾರ್ದ ಕದಡುವಂತಹ ಘಟನೆಗಳಲ್ಲಿ ಪಾಲ್ಗೊಂಡಿದರೆ ವಿವಿಯ ನಿಯಮಗಳ ಪ್ರಕಾರ ಕಠಿಣಕ್ರಮಕೈಗೊಳ್ಳಲಾಗುತ್ತದೆ ಎಂದು ಕುಲಸಚಿವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜೆಎನ್‌ಯು ಗಲಾಟೆ ಪ್ರಕರಣ: ಎಫ್‌ಐಆರ್ ದಾಖಲಿಸಿಕೊಂಡ ದೆಹಲಿ ಪೊಲೀಸ್