ವಯನಾಡ್(ಕೇರಳ): ಇಲ್ಲಿನ ಮೆಪ್ಪಾಡಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯೂನಿಯನ್ ಚುನಾವಣೆಯ ನಂತರ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಮಹಿಳಾ ನಾಯಕಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಲ್ವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಕಿರಣ್ ರಾಜ್, ಅತುಲ್, ಶಿಬಿಲಿ ಹಾಗೂ ಅಬಿನ್ ಬಂಧಿತರು.
ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರೆಂದು ಶಂಕಿಸಲಾದ ದುಷ್ಕರ್ಮಿಗಳು ಡಿ.2 ರಂದು ನಡೆದ ಹಿಂಸಾಚಾರದ ಸಂದರ್ಭದಲ್ಲಿ ಮೆಪ್ಪಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಹೆಚ್‌ಒ) ವಿಬಿನ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಧಿಕಾರಿಗೆ ಮೂಳೆ ಮುರಿತ ಸೇರಿದಂತೆ ಹಲವು ಗಾಯಗಳಾಗಿವೆ. ಪ್ರಕರಣ ಸಂಬಂಧ ಅಲನ್ ಆಂಟೋನಿ (20) ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಚುನಾವಣೆ ನಡೆದ ಬಳಿಕ ಹಿಂಸಾಚಾರ ನಡೆದಿದೆ. ಘಟನೆಯಲ್ಲಿ ಮೆಪ್ಪಾಡಿ ಠಾಣೆ ಸಿಐ ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಸ್‌ಎಫ್‌ಐ ನಾಯಕಿ ಗೌರಿ ಮೇಲೆ ಹಲ್ಲೆ ನಡೆದಿದ್ದು, ಆಕೆಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂದು ಮೆಪ್ಪಾಡಿ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಹಾಗೂ ವಾಹನಗಳನ್ನು ಧ್ವಂಸಗೊಳಿಸಿದ್ದು ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 143 (ಕಾನೂನುಬಾಹಿರ ಸಭೆ), 353 (ದಾಳಿ), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಸ್ಸೋಂ - ಮೇಘಾಲಯ ಗಡಿ ವಿವಾದ ಉಲ್ಬಣ: ಮೇಘಾಲಯದಲ್ಲಿ ಹಿಂಸಾಚಾರ