ಹಾಪುರ್(ಉತ್ತರ ಪ್ರದೇಶ): ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆಯಿಂದ ತೊಂದರೆ ಉಂಟಾಗಿದೆ. ಕೆಲವೊಂದು ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ನಾನೈ ಗ್ರಾಮವೂ ಇದರಿಂದ ಹೊರತಾಗಿಲ್ಲ. ಈ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಕ್ಷೇತ್ರದ ಶಾಸಕನಿಗೆ ಶಿಕ್ಷೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗಿರುವ ಕಾರಣ ನಾನೈ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹೀಗಾಗಿ ಜನರು ಇನ್ನಿಲ್ಲದ ಸಮಸ್ಯೆಗೊಳಗಾಗಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಶಾಸಕರು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ನೀರು ತುಂಬಿದ್ದ ರಸ್ತೆಯಲ್ಲಿಯೇ ಬಿಜೆಪಿ ಶಾಸಕ ನಡೆದುಕೊಂಡು ಹೋಗುವಂತೆ ಶಿಕ್ಷೆ ನೀಡಿದ್ದಾರೆ.
ನಾನೈ ಗ್ರಾಮದಲ್ಲಿ ಪಾದಯಾತ್ರೆ ಆಯೋಜನೆಗೊಂಡಿದ್ದರಿಂದ ಬಿಜೆಪಿ ಶಾಸಕ ಮುಕ್ತೇಶ್ವರ ಕಮಲ್ ಮಲಿಕ್ ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ವಾಹನದಿಂದ ಕೆಳಗಿಳಿಸಿ ನಡೆದುಕೊಂಡು ಹೋಗಿ ಎಂದಿದ್ದಾರೆ. ಈ ವೇಳೆ ಕೆಲವರು ಇದರ ವಿಡಿಯೋ ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ಭೇಟಿ ಮಾಡಿದ ಬೊಮ್ಮಾಯಿ: ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರಾತಿಗೆ ಮನವಿ
ತಮ್ಮ ಸಮಸ್ಯೆ ಬಗ್ಗೆ ಮಾತನಾಡಿರುವ ಸ್ಥಳೀಯರು, ಕಳೆದ ನಾಲ್ಕು ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕ ಮುಕ್ತೇಶ್ವರ್ ಒಂದು ಸಲ ಕೂಡ ಇಲ್ಲಿಗೆ ಬಂದಿಲ್ಲ. ಗ್ರಾಮಸ್ಥರು ಮೂಲಭೂತ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದು, ನಮಗೆ ಸರಿಯಾದ ರಸ್ತೆ ಸಂಪರ್ಕ ಸಹ ಕಲ್ಪಿಸಿಲ್ಲ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಚುನಾವಣಾ ಯೋಜನೆ ರೂಪಿಸಿಕೊಳ್ಳಲು ಶುರು ಮಾಡಿವೆ.