ಪಾಟ್ನಾ: ಬಿಹಾರದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ವಿವಾದಕ್ಕೆ ಈಡಾಗಿದೆ. ಮಹಿಳಾ ಅಧಿಕಾರಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸರ್ಕಾರವು 20-30 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದಲ್ಲವೇ ಎಂದು ವಿದ್ಯಾರ್ಥಿಯೊಬ್ಬರು ಬಿಹಾರ ಸರ್ಕಾರದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಕೇಳಿದ್ದಾರೆ. ಈ ವೇಳೆ ಐಎಎಸ್ ಅಧಿಕಾರಿ ನೀಡಿದ ಉತ್ತರದಿಂದ ಎಲ್ಲರೂ ದಂಗಾಗಿದ್ದಾರೆ. ನಾಳೆ ಸರ್ಕಾರ ನಿಮಗೆ ಕುಟುಂಬ ಯೋಜನೆ ವಿಧಾನಗಳು ಮತ್ತು ಕಾಂಡೋಮ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತೀರಾ ಎಂದು ಮರು ಪ್ರಶ್ನೆ ಹಾಕಿದ್ದಾರೆ ಅಧಿಕಾರಿ. ಐಎಎಸ್ ಅಧಿಕಾರಿ ಅವರ ಈ ಮಾತೇ ಈಗ ವಿವಾದಕ್ಕೆ ಈಡಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಮಹಿಳಾ ಐಎಎಸ್ ಅಧಿಕಾರಿ ಮಾತನಾಡಿದ್ದೇನು? ಈ ಬೇಡಿಕೆಗಳಿಗೆ ಯಾವುದೇ ಮಿತಿ ಇದೆಯೇ, 20-30 ರೂಗೆ ಸ್ಯಾನಿಟಿರಿ ಪ್ಯಾಡ್‌ಗಳನ್ನು ನೀಡಬಹುದಾ? ನಾಳೆ ನೀವು ಜೀನ್ಸ್ ಮತ್ತು ನಂತರ ಸುಂದರವಾದ ಬೂಟುಗಳನ್ನು ಕೇಳುತ್ತೀರಿ. ಇನ್ನು ಕುಟುಂಬ ಯೋಜನೆಗೆ ಬಂದಾಗ ಕಾಂಡೋಮ್‌ಗಳನ್ನು ಸಹ ಉಚಿತವಾಗಿ ನೀಡಬೇಕಾಗುತ್ತದೆ ಎಂದಿದ್ದಾರೆ.
ಅಧಿಕಾರಿಯ ಈ ಮಾತಿಗೆ ತಕ್ಷಣ ವಿದ್ಯಾರ್ಥಿನಿ ಜನರ ಮತಗಳಿಂದಲೇ ಸರ್ಕಾರ ರಚನೆ ಮಾಡುತ್ತವೆ ಎಂದಿದ್ದಾರೆ. ಇದಕ್ಕೆ ಮತ್ತೆ ತಿರುಗೇಟು ನೀಡಿದ್ದಾರೆ. ಇದು ಮೂರ್ಖತನದ ಪರಮಾವಧಿ ಎಂದಿದ್ದಾರೆ.
ಸಶಕ್ತ್ ಬೇಟಿ ಸಮೃದ್ಧ್ ಬಿಹಾರ ಸಂವಾದದಲ್ಲಿ ಈ ವಿವಾದ: ಅಂದ ಹಾಗೆ ವಿದ್ಯಾರ್ಥಿನಿ ಹಾಗೂ ಐಎಎಸ್ ಅಧಿಕಾರಿ ನಡುವೆ ನಡೆದ ಈ ಸಂವಾದ ‘ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ’ ಎಂಬ ಕಾರ್ಯಾಗಾರದಲ್ಲಿ. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಯುನಿಸೆಫ್ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.
ಇನ್ನು ಸಂವಾದದಲ್ಲಿ ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು ಎಂದು ವಿದ್ಯಾರ್ಥಿಗೆ ಅರ್ಥವಾಗುವಂತೆ ಮಾಡಲು ಐಎಎಸ್ ಪ್ರಯತ್ನಿಸಿದರು ಎನ್ನಲಾಗಿದೆ.
ಇದನ್ನು ಓದಿ: ಪಿಎಫ್‌ಐ ನಿಷೇಧಕ್ಕೂ, ಪ್ರವೀಣ್ ನೆಟ್ಟಾರು ಹತ್ಯೆಗೂ ಇದೆ ನಂಟು.. ಕೇಂದ್ರದ ಅಧಿಸೂಚನೆಯಲ್ಲಿ ಪ್ರವೀಣ್ ನೆಟ್ಟಾರು ಹೆಸರು ಉಲ್ಲೇಖ..!