ಮಂಡಿ(ಹಿಮಾಚಲಪ್ರದೇಶ): ಹಿಮಾಚಲಪ್ರದೇಶ ದೇವ ಭೂಮಿಯೆಂದೇ ಹೆಸರುವಾಸಿ. ಇಲ್ಲಿನ ಜನರು ದೇವರ ಬಗ್ಗೆ ಆಳವಾದ ನಂಬಿಕೆ ಹೊಂದಿದ್ದಾರೆ. ಚೌಹಾರ್ ಕಣಿವೆಯ ಜನರು ಹುರಂಗು ನಾರಾಯಣ್ ಜತೆಗೆ ಇತರೆ ದೇವರುಗಳ ಮೇಲೂ ಅಪಾರ ನಂಬಿಕೆ ಇಟ್ಟಿದ್ದಾರೆ.
ಮಂಡಿ ಜಿಲ್ಲೆಯ ಡ್ರಾಂಗ್ ವಿಧಾನಸಭಾ ಕ್ಷೇತ್ರದ ಚೌಹಾರ್ ಕಣಿವೆಯಲ್ಲಿ ಕ್ಷೀರ ಹರಿದು ಬರುತ್ತಿದೆ. ಗುಡ್ಡದ ಮೇಲಿಂದ ಹಾಲು ಹರಿದು ಬರುತ್ತಿದ್ದು, ನೆಲಕ್ಕೆ ಬಂದ ಸ್ವಲ್ಪ ಸಮಯದಲ್ಲೇ ಮೊಸರಾಗಿ ಪರಿವರ್ತನೆಯಾಗುತ್ತದೆ.
ಚೌಹಾರ್ ಕಣಿವೆಯ ಸ್ಥಳೀಯರು ಈ ಅಚ್ಚರಿಯ ದೃಶ್ಯ ಕಣ್ತುಂಬಿಕೊಳ್ಳಲು ದೌಡಾಯಿಸುತ್ತಿದ್ದಾರೆ. ಈ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಮಹಾದೇವನ ಸ್ಥಳವೂ ಇದೆ. ಇನ್ನೊಂದು ಗುಡ್ಡದೊಳಗೆ ಸಣ್ಣ ಸಣ್ಣ ಹೊಂಡಗಳನ್ನು ನಿರ್ಮಿಸಲಾಗಿದೆ. ಅದರ ಒಳಗೆ ಬಹಳ ಹಿಂದಿನಿಂದಲೂ ಮಹಿಳೆಯರ ಸ್ತನ ಹೋಲುವ ರೀತಿಯ ಆಕೃತಿಗಳಿವೆ. ಅಲ್ಲಿಯೂ ಕ್ಷೀರ ರೀತಿಯ ದ್ರವ ಹರಿದು ಬರುತ್ತಿದ್ದು, ಜನರು ಪೂಜೆ ಸಲ್ಲಿಸುತ್ತಾರೆ.
ಸದ್ಯ, ಮಹಾದೇವನ ದೇಗುಲದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ದಲು ಹಳ್ಳಿಯಲ್ಲೂ ಆರೇಳು ಕಡೆ ಕ್ಷೀರ ದ್ರವ ಹರಿದು ಬರುತ್ತಿದೆ. ಜನರು ಇಲ್ಲಿಯೂ ಪೂಜೆ ಸಲ್ಲಿಸುತ್ತಿದ್ದಾರೆ. ರೋಪಾ ಹಳ್ಳಿಯ ವ್ಯಕ್ತಿಯೊಬ್ಬರು 5 ವರ್ಷಗಳ ಹಿಂದೆ ಬೆಟ್ಟದಿಂದ ಹಾಲು ಬರುತ್ತಿರುವುದನ್ನು ನೋಡಿದ್ದರು. ಆದರೆ, ಅವರು ಈ ದೃಶ್ಯವನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಮಳೆ ಬಂದಾಗ ಮೀನುಗಾರರು ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಗುಡ್ಡದ ಮೇಲಿಂದ ಹಾಲು ಹರಿಯುತ್ತಿರುವುದನ್ನು ಗಮನಿಸಿದ ಅವರು, ಊರಿನ ಜನರಿಗೆ ತಿಳಿಸಿದರು.
ಗುಡ್ಡದ ಮೇಲಿಂದ ಹಾಲು ಹರಿದು ಬರುತ್ತಿರುವುದಕ್ಕೆ ಈವರೆಗೆ ಯಾವುದೇ ವೈಜ್ಞಾನಿಕ ಕಾರಣಗಳು ಪತ್ತೆಯಾಗಿಲ್ಲ. ಪ್ರಕೃತಿಯಲ್ಲಿನ ಬದಲಾವಣೆಯೋ, ಜನರು ನಂಬಿರುವಂತೆ ದೈವ ಲೀಲೆಯೋ ಅನ್ನೋದು ಈವರೆಗೆ ಸ್ಪಷ್ಟನೆಯಾಗಿಲ್ಲ.