ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಇಂದು ಬೆಳಗ್ಗೆ 7.30ರ ಸುಮಾರಿಗೆ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗೆ ಸಂಬಂಧಿಸಿ ಅವರು ಮುಂಬೈ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬಾಲಿವುಡ್‌ನ 'ಟ್ರಾಜಿಡಿ ಕಿಂಗ್' ಎಂದೇ ಖ್ಯಾತರಾಗಿದ್ದ ಹಿರಿಯ ನಟ ಬರೋಬ್ಬರಿ ಆರು ದಶಕಗಳವರೆಗೆ ಸಿನಿರಂಗದಲ್ಲಿ ಮಿಂಚಿದವರು. ಅವರು ತಮ್ಮ ವೃತ್ತಿಜೀವನದಲ್ಲಿ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದ ಸಿನಿಮಾಗಳೆಂದರೆ 'ದೇವದಾಸ್' (1955), 'ನಯಾ ದೋರ್' (1957), 'ಮೊಘಲ್-ಎ-ಅಝಮ್' (1960), 'ಗಂಗಾ ಜಮುನಾ (1961), 'ಕ್ರಾಂತಿ' (1981), 'ಕರ್ಮ' (1986) ಮುಂತಾದವು. ಇನ್ನು ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದು 1998ರಲ್ಲಿ ಬಿಡುಗಡೆಯಾದ 'ಕ್ವಿಲಾ' ಸಿನಿಮಾದಲ್ಲಿ.
ಜೂನ್ 30 ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಅವರನ್ನು ದಾಖಲಿಸಲಾಗಿತ್ತು. ಬಳಿಕ ಅವರ ಪತ್ನಿ ಸೈರಾ ಬಾನು, ದಿಲೀಪ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಟ್ವೀಟ್ ಮಾಡಿದ್ದರು. "ದಿಲೀಪ್ ಕುಮಾರ್ ಸಾಬ್ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಇನ್ನೂ ಐಸಿಯುನಲ್ಲಿದ್ದಾರೆ. ನಾವು ಅವರನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಬಯಸುತ್ತೇವೆ. ಅವರ ವೈದ್ಯಕೀಯ ಸ್ಥಿತಿ ತಿಳಿದಿರುವುದರಿಂದ ಅವರನ್ನು ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಅವರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸಿ" ಎಂದಿದ್ದರು.
ಇದಕ್ಕೂ ಮೊದಲು ದಿಲೀಪ್ ಕುಮಾರ್ ಜೂನ್ 6 ರಂದು ಉಸಿರಾಟದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.