ಪಿಂಪ್ರಿ-ಚಿಂಚ್‌ವಾಡ್(ಮಹಾರಾಷ್ಟ್ರ): ಬೆನ್ನುಮೂಳೆಯ ಸ್ನಾಯು ಕ್ಷೀಣತೆ (Spinal Muscular Atrophy) ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ವೇದಿಕಾ ಶಿಂಧೆ ಎಂಬ ಮಗು ಕೊನೆಯುಸಿರೆಳೆಯಿತು.
ಈ ಮಗುವಿನ ಚಿಕಿತ್ಸೆಗೆಂದು ಧನಸಂಗ್ರಹ ಮಾಡಿ ಸುಮಾರು 16 ಕೋಟಿ ರೂ. ವೆಚ್ಚದ ಜೊಲ್ಜೆನ್ಸ್ಮಾ ಲಸಿಕೆಯನ್ನು ಯುಎಸ್ನಿಂದ ಆಮದು ಮಾಡಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ಈ ಧನಸಂಗ್ರಹ ಅಭಿಯಾನಕ್ಕೆ ಇಡೀ ದೇಶವೇ ಮುಂದಾಗಿತ್ತು. ಆದರೆ ಯಾವುದೇ ಅಭಿಯಾನ, ಪ್ರಾರ್ಥನೆ ಫಲಿಸಲಿಲ್ಲ. ಆಕೆ ಸಾವಿನ ವಿರುದ್ಧದ ಹೋರಾಟದಲ್ಲಿ ಸಫಲವಾಗಲಿಲ್ಲ.
ಕಂದಮ್ಮ ವೇದಿಕಾ ಕೇವಲ 11 ತಿಂಗಳ ಹಸುಗೂಸು. ಹುಟ್ಟುತ್ತಲ್ಲೇ ಬಂದಿದ್ದ ಅಪರೂಪದ ಕಾಯಿಲೆಗೆ ಭಾರತದಲ್ಲಿ ಚಿಕಿತ್ಸೆ ನೀಡಲಾಗಿದ್ದರೂ, 16 ಕೋಟಿ ರೂ. ವೆಚ್ಚದ ಜೊಲ್ಜೆನ್ಸ್ಮಾ ಎಂಬ ಲಸಿಕೆಯನ್ನು ಅಮೆರಿಕಾದಿಂದ ಆಮದು ಮಾಡಬೇಕಿತ್ತು. ಆದರೆ ತಂದೆ ತಾಯಿ ಅಷ್ಟೊಂದು ಹಣ ಸಂಗ್ರಹ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಅನೇಕ ಮನಸ್ಸುಗಳು ಒಟ್ಟಾಗಿ ಧನ ಸಂಗ್ರಹ ಮಾಡಿ ಲಸಿಕೆಯನ್ನು ತರಿಸಿ ಜೂ.15ರಂದು ವೇದಿಕಾಗೆ ನೀಡಲಾಯಿತು. ಇನ್ನೇನು ಆಕೆ ಗುಣಮುಖಳಾಗುತ್ತಾಳೆ ಎಂದು ಭಾವಿಸಲಾಗಿತ್ತು. ಆದರೆ ವಿಧಿಯಾಟದ ಮುಂದೆ ಶ್ರಮವೆಲ್ಲ ಸೋತು, ಭಾನುವಾರದಂದು ವೇದಿಕಾ ಅಸುನೀಗಿದ್ದಾಳೆ.
ಫೆಬ್ರವರಿ ತಿಂಗಳಲ್ಲಿ, ವೇದಿಕಾ ದೇಹದಲ್ಲಿ ಚಲನೆ ನೈಸರ್ಗಿಕವಾಗಿ ನಡೆಯುತ್ತಿಲ್ಲ ಎಂದು ಕಂಡುಬಂದಿತು. ಹೀಗಾಗಿ ಆಕೆಯ ಪೋಷಕರು ವೈದ್ಯರನ್ನು ಸಂಪರ್ಕಿಸಿದಾಗ, ಅಪರೂಪದ ರೋಗ ಇರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ಮಗುವಿನ ಚಿಕಿತ್ಸೆಗೆ 16 ಕೋಟಿ ರೂಪಾಯಿ ವೆಚ್ಚದ ಲಸಿಕೆ ಹಾಕಬೇಕು ಎಂದು ವೈದ್ಯರು ತಿಳಿಸಿದ್ದರು.