ಕೋಲ್ಕತ್ತಾ( ಪಶ್ಚಿಮ ಬಂಗಾಳ): ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಿದವರನ್ನು ಪತ್ತೆ ಹಚ್ಚಿದ ರೈಲ್ವೇ ಇಲಾಖೆ ಕ್ರಮ ಕೈಗೊಂಡಿದೆ. ರೈಲ್ವೇ ಪ್ರಕಾರ, ಹೌರಾ - ಹೊಸ ಜಲ್ಪೈಗುರಿ ವಂದೇ ಭಾರತ್ ರೈಲಿನ ರೇಕ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಿಂದ ತೆಗೆದ ವಿಡಿಯೋ ದೃಶ್ಯಗಳು ಮತ್ತು ಛಾಯಾಚಿತ್ರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
ಹೌರಾದಿಂದ ನ್ಯೂ ಜಲ್ಪೈಗುರಿಗೆ ಹೋಗುವ ಮಾರ್ಗದಲ್ಲಿ ಮಾಲ್ಡಾ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯ ಆರೋಪಿಗಳನ್ನು ಗುರುತಿಸಲಾಗಿದೆ. ಇದಾದ ಬಳಿಕ ಇದೀಗ ರೈಲ್ವೇ ರಕ್ಷಣಾ ಪಡೆ ರಾಜ್ಯ ಜಿಆರ್‌ಪಿ ಸೇರಿ ಬಂಧನ ಪ್ರಕ್ರಿಯೆ ಆರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಒತ್ತಡ ಹೇರಲಿದೆ.
ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನ ಮೇಲೆ ಸತತ ಎರಡು ಬಾರಿ ಕಲ್ಲು ತೂರಾಟದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮಾಲ್ಡಾದ ಕುಮಾರ್‌ಗಂಜ್ ನಿಲ್ದಾಣದ ಬಳಿ ಸೋಮವಾರ ಮೊದಲ ಬಾರಿಗೆ ಈ ಘಟನೆ ನಡೆದಿದೆ. ಮಂಗಳವಾರ ವಂದೇ ಭಾರತ್ ರೈಲು ಹೌರಾದಿಂದ ನ್ಯೂ ಜಲ್ಪೈಗುರಿಗೆ ಹೋಗುತ್ತಿದ್ದಾಗ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಲ್ಲು ತೂರಾಟ ನಡೆದಿತ್ತು ಎಂದು ವರದಿಯಾಗಿತ್ತು.
ಈ ಪ್ರಕರಣಗಳಲ್ಲಿ ರೈಲ್ವೆ ಕಾಯಿದೆಯ ಸೆಕ್ಷನ್ 154 ರ ಅಡಿ ಆರ್‌ಪಿಎಫ್ ಚೌಕಿ/ಎನ್‌ಜೆಪಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಸ್ತುತ, ಅಂತಹ ಬೆದರಿಕೆಗಳನ್ನು ತಡೆಗಟ್ಟಲು ಆರ್‌ಪಿಎಫ್ ಜಾಗೃತಿ ಅಭಿಯಾನ ಪ್ರಾರಂಭಿಸಿದೆ. ರೈಲ್ವೆ ಆಸ್ತಿಗೆ ಹಾನಿಯುಂಟು ಮಾಡುವ ಯಾವುದೇ ಉದ್ದೇಶವನ್ನು ಪತ್ತೆಹಚ್ಚಲು ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ನಿಗಾ ಇರಿಸಲಾಗುತ್ತದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಏನಿದು ಘಟನೆ: ಪಶ್ಚಿಮ ಬಂಗಾಳದ ಉತ್ತರ ಪ್ರದೇಶದಲ್ಲಿ ಹೌರಾ-ಹೊಸ ಜಲಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಇತ್ತೀಚೆಗೆ ಕಲ್ಲುಗಳನ್ನು ಎಸೆಯಲಾಯಿತು. ಇದರಿಂದಾಗಿ ಎರಡು ಕೋಚ್‌ಗಳ ಕಿಟಕಿಗಳು ಹಾನಿಗೊಳಗಾಗಿವೆ. ಈ ಹಿಂದೆ ನ್ಯೂ ಜಲ್ಪೈಗುರಿಯಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಕಲ್ಲು ತೂರಾಟದಿಂದಾಗಿ ಕೋಚ್‌ನ ಬಾಗಿಲಿನ ಗಾಜು ಒಡೆದಿತ್ತು. ನ್ಯೂ ಜಲ್ಪೈಗುರಿ ನಿಲ್ದಾಣವನ್ನು ತಲುಪುವ ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳ ತಲಾ ಒಂದು ಕಿಟಕಿಯ ಗಾಜುಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗಳು ನಡೆಯದಂತೆ ಜಾಗೃತಿ: ಈ ಘಟನೆಗಳ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಅಭಿಯಾನವನ್ನೂ ಆರಂಭಿಸಲಾಗಿದೆ. ಹೌರಾ-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ವಾಸ್ತವಿಕವಾಗಿ ಉದ್ಘಾಟಿಸಿದರು ಮತ್ತು ಅದರ ವಾಣಿಜ್ಯ ಸೇವೆಗಳು ಜನವರಿ 1 ರಂದು ಪ್ರಾರಂಭವಾಗಿತ್ತು.
ನಮ್ಮ ರಾಜ್ಯದಲ್ಲಿ ಕಲ್ಲು ತೂರಾಟ ನಡೆದಿಲ್ಲ- ಮಮತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತದ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪದೇ ಪದೇ ದಾಳಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಎಲ್ಲ ಕಡೆಯಿಂದ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಮುಖ್ಯಮಂತ್ರಿಗಳು ಗುರುವಾರ ಗಂಗಾಸಾಗರದಿಂದ ಕೋಲ್ಕತ್ತಾಗೆ ಹಿಂತಿರುಗುವಾಗ ಹೆಲಿಪ್ಯಾಡ್‌ನಿಂದಲೇ ಉತ್ತರಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಿದ್ದು ತಮ್ಮ ರಾಜ್ಯದಲ್ಲಿ ಅಲ್ಲ ಆದರೆ ನೆರೆಯ ಬಿಹಾರದಲ್ಲಿ ಎಂದು ಹೇಳಿದ್ದಾರೆ.
ಸುಳ್ಳು ಸುದ್ದಿ ಬಿತ್ತರಿಸಿರುವವರ ವಿರುದ್ಧ ಕಾನೂನು ಕ್ರಮ: ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಾಗರ್ ದ್ವೀಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, 'ವಂದೇ ಭಾರತ್ ಮೇಲೆ ಕಲ್ಲೆಸೆಯಲಾಗಿದ್ದು ಬಿಹಾರದಲ್ಲಿ, ಪಶ್ಚಿಮ ಬಂಗಾಳದಲ್ಲಿ ಅಲ್ಲ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ರಾಜ್ಯದ ಮಾನಹಾನಿ ಮಾಡಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
ಓದಿ: ಪಶ್ಚಿಮಬಂಗಾಳದಲ್ಲಿ ವಂದೇ ಭಾರತ್ ಸುಗಮ ಸಂಚಾರಕ್ಕೆ ಭದ್ರತೆ ಹೆಚ್ಚಳ.. ಮೇಲ್ವಿಚಾರಣೆಗೆ ವಾಟ್ಸಾಪ್ ಗ್ರೂಪ್ ರಚನೆ