ಮಸ್ಸೂರಿ, ಉತ್ತರಾಖಂಡ್: ಹೆಚ್ಚುತ್ತಿರುವ ಕಳ್ಳತನದ ಘಟನೆಗಳಿಂದಾಗಿ ಮಸ್ಸೂರಿಯ ಪೊಲೀಸರ ಮೇಲೆ ಜನರ ಅಸಮಾಧಾನವಿದೆ. ನಗರದಲ್ಲಿ ಕಳ್ಳತನದ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಸ್ಥಳೀಯರ ಆರೋಪವಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಪೊಲೀಸರಿಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.
ರಾತ್ರಿ ಗಸ್ತು ಕೂಡ ತಿರುಗುತ್ತಿಲ್ಲ. ಮಸ್ಸೂರಿಯ ಸಿವಿಲ್ ರೋಡ್, ಘಂಟಾಘರ್ ಮತ್ತು ಹುಸೈಂಗಂಜ್‌ನಲ್ಲಿ ತಡರಾತ್ರಿ ವಾಹನಗಳ ಗಾಜುಗಳನ್ನು ಒಡೆದು ಕಳ್ಳರು ಬೆಲೆಬಾಳುವ ವಸ್ತುಗಳು, ಪೇಪರ್‌ಗಳು ಮತ್ತು ಮ್ಯೂಸಿಕ್ ಸಿಸ್ಟಮ್‌ಗಳನ್ನು ಕದ್ದೊಯ್ಯುತ್ತಿರುವುದು ಬೆಳಕಿಗೆ ಬಂದಿದೆ.
ಕಮಿಷನರ್ ಸಹೋದರನ ಕಾರಿನಿಂದ ಕಳ್ಳತನ: ಮಸ್ಸೂರಿಯ ಹುಸೈಂಗಂಜ್ನಲ್ಲಿರುವ ಕುಮಾವೂನ್ ಕಮಿಷನರ್ ದೀಪಕ್ ರಾವತ್ ಅವರ ಸಹೋದರ ದಿವಾಕರ್ ರಾವತ್ ಮತ್ತು ಅವರ ಸ್ನೇಹಿತ ಲೆಫ್ಟಿನೆಂಟ್ ಕರ್ನಲ್ ಪ್ರಣಯ್ ಕಲಾ ಅವರ ವಾಹನಗಳ ಗಾಜುಗಳನ್ನು ಒಡೆದು ಕಳ್ಳರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.
ಬೆಲೆಬಾಳುವ ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮತ್ತೊಂದೆಡೆ ಸಿವಿಲ್ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನದ ಗಾಜು ಒಡೆದ ಕಳ್ಳರು ಅದರಲ್ಲಿದ್ದ ಬಟ್ಟೆ, ಸಾಮಗ್ರಿ, ಟೂಲ್ ಕಿಟ್ ಸೇರಿದಂತೆ ಮುಂತಾದ ಬೆಲೆಬಾಳುವ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ನಗರದಲ್ಲಿ ನಿರಂತರ ಸಕ್ರಿಯವಾಗಿದೆ ಕಳ್ಳರ ಗ್ಯಾಂಗ್!: ನಿರಂತರವಾಗಿ ಕಳ್ಳತನದ ಘಟನಾವಳಿಗಳನ್ನು ನಡೆಯುತ್ತಿದ್ದು, ಮಸ್ಸೂರಿಯಲ್ಲಿ ದರೋಡೆಕೋರರ ತಂಡವೇ ಸಕ್ರಿಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಸ್ಸೂರಿಯಲ್ಲಿ ಪೊಲೀಸ್ ಸಿಬ್ಬಂದಿ ಬಲದ ಕೊರತೆಯಿಂದಾಗಿ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಕತ್ತಲೆಯ ಲಾಭ ಪಡೆಯುತ್ತಿರುವ ಕಳ್ಳರು: ನಗರಸಭೆಯ ನಿರ್ಲಕ್ಷ್ಯದಿಂದ ಹಲವು ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ ಎನ್ನುತ್ತಾರೆ ಜನರು. ಕತ್ತಲೆಯ ಲಾಭವನ್ನು ಪಡೆದುಕೊಂಡು ಕಳ್ಳರು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದೇ ವೇಳೆ ಹಲವೆಡೆ ಸಿಸಿಟಿವಿಗಳು ನಾಪತ್ತೆಯಾಗಿವೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಕಡೆ ಅವು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಈ ಎಲ್ಲ ವಿಷಯಗಳ ಬಗ್ಗೆ ಸೂಕ್ತ ಬಂದೋಬಸ್ತ್ ಮಾಡಬೇಕಾಗಿದೆ.
ಮಸ್ಸೂರಿಯಲ್ಲಿ ಭದ್ರತಾ ಪಡೆಗಳ ಕೊರತೆ: ಮಸ್ಸೂರಿಯಲ್ಲಿ ಸಾಕಷ್ಟು ಪೊಲೀಸ್ ಪಡೆ ಒದಗಿಸಬೇಕು ಎಂದು ಡೆಹ್ರಾಡೂನ್ ಎಸ್‌ಎಸ್‌ಪಿಗೆ ನಗರದ ವಾಸಿಗಳು ಒತ್ತಾಯಿಸಿದ್ದಾರೆ. ಮಸ್ಸೂರಿಯ 60 ಕಿಲೋಮೀಟರ್ ಪ್ರದೇಶದಲ್ಲಿ ಒಬ್ಬ ಎಸ್‌ಎಸ್‌ಐ, ಇಬ್ಬರು ಎಸ್‌ಐ ಮತ್ತು ಕೆಲವು ಕಾನ್ಸ್ ಟೇಬಲ್‌ಗಳು ಮತ್ತು ಪಿಆರ್‌ಡಿ ಜವಾನರನ್ನು ಮಾತ್ರ ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಇದು ತುಂಬಾ ಕಡಿಮೆ. ಮಸ್ಸೂರಿಯಂತಹ ಪ್ರವಾಸಿ ಸ್ಥಳಗಳಲ್ಲಿ ಕಳ್ಳತನದ ಘಟನೆಗಳಿಂದಾಗಿ ಇದು ಮಸ್ಸೂರಿಯ ಪ್ರವಾಸೋದ್ಯಮ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಓದಿ: ಲಗೇಜ್ ನಾಪತ್ತೆ: ವಿಮಾನಯಾನ ಸಂಸ್ಥೆ ವಿರುದ್ಧ ರಾಣಾ ದಗ್ಗುಬಾಟಿ ಅಸಮಾಧಾನ