ಚಮೋಲಿ (ಉತ್ತರಾಖಂಡ): ಹಿಮಹೊದ್ದ ಪರ್ವತ, ವರ್ಣರಂಜಿತ ಹೂವುಗಳು.. ಭೂಲೋಕದ ಸ್ವರ್ಗದಂತಿರುವ ಈ ಪ್ರದೇಶ ಪ್ರವಾಸಿಗರ ಹಾಟ್ ಫೆವರೇಟ್. ಕಣ್ಣಿಗೆ ಹಿಮಾಲಯದ ತಂಪು... ಮನಸ್ಸಿಗೆ ಸುಗಂಧ ಪುಷ್ಟಗಳ ಕಂಪು ನಿಮ್ಮ ರಜೆಯ ಮೋಜಿಗೆ ಹೇಳಿ ಮಾಡಿಸಿದಂತಿರುವ ಸುಂದರ ತಾಣ ಈ ವ್ಯಾಲಿ ಆಫ್ ಫ್ಲವರ್ಸ್.
ನಾವು ವಿಶ್ವಪ್ರಸಿದ್ಧ ಹೂವುಗಳ ಕಣಿವೆ ಬಗ್ಗೆ ಮಾತನಾಡುತ್ತಿದ್ದೇವೆ. ಈ ಹೂಗಳ ಕಣಿವೆ ಇರುವುದು ಉತ್ತರಾಖಂಡನ ಚಮೋಲಿಯಲ್ಲಿ. ಇಲ್ಲಿಗೆ ಪ್ರತಿವರ್ಷ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ರಮಣೀಯ ಸ್ಥಳ. ನಿಸರ್ಗದತ್ತವಾದ ಈ ಸೌಂದರ್ಯಕ್ಕೆ ಮನಸೋಲದವರಿಲ್ಲ.. ಮಾರು ಹೋಗದವರಿಲ್ಲ.
ಸ್ಥಳೀಯ ಜನರು ಈ ಹೂವಿನ ಕಣಿವೆಯನ್ನು ಯಕ್ಷಯಕ್ಷಿಣಿಯರ ವಾಸಸ್ಥಾನವೆಂದು ಪರಿಗಣಿಸುತ್ತಾರೆ. ವ್ಯಾಲಿ ಆಫ್ ಫ್ಲವರ್ಸ್ ಅನ್ನು 1931 ರಲ್ಲಿ ಬ್ರಿಟಿಷ್ ಪರ್ವತಾರೋಹಿಗಳಾದ ಫ್ರಾಂಕ್ ಸ್ಮಿತ್ ಮತ್ತು ಹೋಲ್ಡ್ಸ್ವರ್ಥ್ ಕಂಡುಹಿಡಿದರು. ಬಳಿಕ ಈ ಹೂಗಳ ಕಣಿವೆ ವಿಶ್ವ ಪ್ರಸಿದ್ಧವಾಯಿತು.
ಹೂವುಗಳ ಕಣಿವೆಯ ಉಲ್ಲೇಖವು ನಮ್ಮ ಧಾರ್ಮಿಕ ಗ್ರಂಥಗಳಲ್ಲಿಯೂ ಇದೆ ಎಂದು ಇಲ್ಲಿನ ಕೆಲವು ಜನರು ನಂಬುತ್ತಾರೆ. ರಾಮ-ರಾವಣರ ಯುದ್ಧದ ಸಮಯದಲ್ಲಿ ಲಕ್ಷ್ಮಣ ಮೂರ್ಛೆ ಹೋದ ನಂತರ ಹನುಮಂತ ಇದೇ ಪರ್ವತದಿಂದ ಸಂಜೀವನಿ ತೆಗೆದುಕೊಂಡು ಹೋದರು ಎಂದು ನಂಬಲಾಗಿದೆ. ವಾಸ್ತವವಾಗಿ, ಈ ಎತ್ತರದ ಹಿಮಾಲಯದಲ್ಲಿ ಅಮೂಲ್ಯವಾದ ಗಿಡಮೂಲಿಕೆಗಳು ಕಂಡುಬರುತ್ತವೆ. ಇದನ್ನು ಅನೇಕ ರೋಗಗಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ.
ಒಟ್ಟಿನಲ್ಲಿ ಪ್ರಕೃತಿದತ್ತವಾದ ಈ ಮನಮೋಹಕ ಸ್ಥಳಕ್ಕೆ ಪ್ರತಿನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ನೀವು ಎಂದಾದರೂ ಪ್ರವಾಸಕ್ಕೆ ಹೋಗಬೇಕೆಂದು ಕೊಂಡರೆ ಒಮ್ಮೆ ಈ ಜಾಗಕ್ಕೆ ಭೇಟಿ ನೀಡಿ.