ಬಂಡಿಪೋರಾ, ಜಮ್ಮು-ಕಾಶ್ಮೀರ: ಕೊರೊನಾ ಲಸಿಕೆ ಹಾಕಲು ಗ್ರಾಮಕ್ಕೆ ತೆರಳಿದ ವೇಳೆ ಕುಟುಂಬವೊಂದರ ಸದಸ್ಯರು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಡಿಪೋರಾದ ಝೆಬನ್ ಚುಂಟಿಮುಲ್ಲಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ವ್ಯಾಕ್ಸಿನ್ ಹಾಕಲು ತೆರಳಿದ್ದ ವೇಳೆ ಮಹಿಳೆಯೋರ್ವಳು ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲುಗಳನ್ನು ಎಸೆದು, ವ್ಯಾಕ್ಸಿನೇಷನ್ಗೆ ಅಡ್ಡಿಪಡಿಸಿದ್ದಾಳೆ.
ಗ್ರಾಮಕ್ಕೆ ತೆರಳಿದ ವೈದ್ಯಕೀಯ ಸಿಬ್ಬಂದಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವಂತೆ ಮನವಿ, ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದರ ಲಾಭಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಡಿಪೋರಾದ ಉಪ ಆಯುಕ್ತರಾದ ಡಾ. ಓವೈಸಿ ತನಿಖೆಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 4E ಮೂಲಕ ದೇಶದಲ್ಲಿ ರಸ್ತೆಗಳ ಸುರಕ್ಷತೆ: ಅಪಘಾತ ಪ್ರಮಾಣ ತಗ್ಗಿಸಲು ಕೇಂದ್ರದ ಸಂಕಲ್ಪ
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.