ನವದೆಹಲಿ/ಬೆಂಗಳೂರು: ದೇಶಾದ್ಯಂತ ಈಗಾಗಲೇ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಇಂದಿನಿಂದ ಪ್ರಿಕಾಷನ್ ಡೋಸ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆರೋಗ್ಯ ಸಿಬ್ಬಂದಿ, ಕೋವಿಡ್ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇಂದಿನಿಂದ ಪ್ರಿಕಾಷನ್ ಡೋಸ್ ನೀಡಿಕೆ ಆರಂಭವಾಗಲಿದೆ.
ಇದಕ್ಕಾಗಿ ಶುಕ್ರವಾರದಿಂದಲೇ ಕೋವಿನ್ ವೆಬ್ಸೈಟ್ನಲ್ಲಿ ನೋಂದಣಿ ಕೂಡಾ ಆರಂಭವಾಗಿದೆ. ಡಿಸೆಂಬರ್25 ರಂದು ದಿಢೀರ್ ಆಗಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 15-18 ವರ್ಷದ ಮಕ್ಕಳು ಹಾಗೂ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ ಪ್ರಿಕಾಷನ್ ಡೋಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದಿನಿಂದ ಪ್ರಿಕಾಷನ್( ಬೂಸ್ಟರ್ ಡೋಸ್) ಲಸಿಕೆ ನೀಡಿಕೆಗೆ ಚಾಲನೆ ಸಿಗಲಿದೆ.
ರೂಪಾಂತರಿ ಒಮಿಕ್ರಾನ್ ತಡೆಯಲು ಹಲವು ತಜ್ಞರು ಬೂಸ್ಟರ್ ಡೋಸ್ಗೆ ಶಿಫಾರಸು ಮಾಡಿದ್ದರು. ಜನವರಿ 10 ರಿಂದ ಅಂದರೆ ಇಂದಿನಿಂದ ರಾಜ್ಯದಲ್ಲೂ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ.
ಬೆಂಗಳೂರಿನಲ್ಲಿ ಸಿಎಂ ಚಾಲನೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಈ ಲಸಿಕಾಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಯಾರೆಲ್ಲಾ ಅರ್ಹರು?
ಬೂಸ್ಟರ್ ಡೋಸ್ ಪಡೆಯುವ ವಿಧಾನ :
- ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿದಂತೆ ಎರಡು ಡೋಸ್ ಪಡೆದಿರಬೇಕು.
- ಎರಡನೇ ಡೋಸ್ ಪಡೆದು 9 ತಿಂಗಳು (39 ವಾರಗಳಾಗಿರಬೇಕು)ಆಗಿರಬೇಕು.
- ಎರಡು ಡೋಸ್ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು.
ಬೂಸ್ಟರ್ ಡೋಸ್ಗೆ ಯಾವ ಲಸಿಕೆ ನೀಡಲಾಗುತ್ತದೆ?
- ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮೂರನೇ ಡೋಸ್ ಕೋವಿಶೀಲ್ಡ್ ಅನ್ನೇ ಪಡೆಯಬೇಕು.
- ಕೋವ್ಯಾಕ್ಸಿನ್ ಪಡೆದವರು ಮೂರನೇ ಡೋಸ್ಗೆ ಕೋವ್ಯಾಕ್ಸಿನ್ ಅನ್ನೇ ಪಡೆಯಬೇಕು.
ಎಲ್ಲೆಲ್ಲಿ ಬೂಸ್ಟರ್ ಡೋಸ್ ಲಭ್ಯ?
- ಎಲ್ಲಾ ಸರ್ಕಾರಿ ಲಸಿಕಾಕರಣ ಕೇಂದ್ರಗಳಲ್ಲಿ ಲಭ್ಯ.
- ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯ.
- ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಿಗಲಿದೆ.
ಇದನ್ನೂ ಓದಿ: ಬಟಾ ಬಯಲಾಯ್ತು ನಕಲಿ ವಿಕಲಚೇತನನ ಬಣ್ಣ.. ಕೈ ಇಲ್ಲ ಎಂದು ಭಿಕ್ಷೆ ಬೇಡುತ್ತಿದ್ದವನಿಗೆ ತಟ್ಟಿತು ಬಿಸಿ..
ನೋಂದಣಿ ಮತ್ತು ಲಸಿಕಾಕರಣಕ್ಕೆ ವೇಳೆಯನ್ನು ನಿಗದಿಪಡಿಸಿಕೊಳ್ಳುವ ಸೇವೆಗಳನ್ನು ಆನ್‌ಲೈನ್ ಮತ್ತು ಆನ್‌ಸೈಟ್ (ವಾಕ್-ಇನ್) ವಿಧಾನಗಳ ಮೂಲಕ ಪಡೆದುಕೊಳ್ಳಬಹುದು. ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಂಡ ವಿವರವನ್ನು ಕೋವಿನ್ ಪೋರ್ಟಲ್ ಮುಖಾಂತರ ಡಿಜಿಟಲ್ ಲಸಿಕಾ ಪ್ರಮಾಣ ಪತ್ರ ಪಡೆಯಬಹುದು.
ಲಸಿಕೆ ಮಾಹಿತಿ : ರಾಜ್ಯವು 18 ವರ್ಷ ಮೇಲ್ಪಟ್ಟವರಿಗೆ 4.89 ಕೋಟಿ ಲಸಿಕಾಕರಣ ನಡೆಸುವ ಗುರಿ ಹೊಂದಿದೆ. ಈವರೆಗೂ 4.8 ಕೋಟಿ (ಶೇ. 99) ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 3.9 ಕೋಟಿ (ಶೇ.81) ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.
15-18 ವರ್ಷದ 31.75 ಲಕ್ಷ ಫಲಾನುಭವಿಗಳಿಗೆ ಲಸಿಕಾಕರಣ ನಡೆಸುವ ಗುರಿ ಹೊಂದಲಾಗಿದೆ. 15.5 ಲಕ್ಷ (ಶೇ. 49) ಫಲಾನುಭವಿಗಳಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ.