ಉತ್ತರಕಾಶಿ(ಉತ್ತರಾಖಂಡ): ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರಿಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವೇಗದಿಂದ ಸಾಗಿದ್ದು, ಅಲ್ಲಿ ಸಿಲುಕಿರುವ ಕಾರ್ಮಿಕರು ಸುರಂಗದಿಂದ ಹೊರಬರಲು ಕ್ಷಣಗಣನೆ ಆರಂಭವಾಗಿದೆ. 'ರಾಟ್ ಹೋಲ್ ಗಣಿಗಾರರ' ಗುಂಪು (ಕಲ್ಲಿದ್ದಲು ಗಣಿಗಳಲ್ಲಿ ಕಿರಿದಾದ ಹಾದಿಗಳನ್ನು ಅಗೆಯುವ ತಜ್ಞರು) ನೆಲಕ್ಕೆ ಸಮನಾಂತರವಾಗಿ ನಿಂತುಹೋದ ಸ್ಥಳದಲ್ಲಿ ಲಘು ಉತ್ಖನನ ನಡೆಸುತ್ತಿದೆ. ಹೀಗಾಗಿ, ಯಾವುದೇ ಕ್ಷಣದಲ್ಲೂ ಸಂತ್ರಸ್ತರನ್ನು ಹೊರತರುವ ಸಾಧ್ಯತೆಗಳಿವೆ. ಈಗಾಗಲೇ ಕಾರ್ಮಿಕರ ಕುಟುಂಬಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಉತ್ಖನನ ಕಾರ್ಯ ನಡೆಯುತ್ತಿದೆ. ಇನ್ನೂ 2-3 ಮೀಟರ್ ಕೊರೆಯಬೇಕಿದೆ. ಇಂದು ಸಂಜೆ 5 ಗಂಟೆಯೊಳಗೆ ಕಾರ್ಮಿಕರು ಹೊರಬರುವ ನಿರೀಕ್ಷೆ ಇದೆ ಎಂದು ಸೂಕ್ಷ್ಮ ಸುರಂಗ ತಜ್ಞ ಕ್ರಿಸ್ ಕೂಪರ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಮತ್ತೊಂದೆಡೆ, ಮ್ಯಾನ್ಯುವಲ್ ಡ್ರಿಲ್ಲಿಂಗ್ ಕಡೆಗೆ ಸಂಪೂರ್ಣ ಗಮನಹರಿಸಲು ಬೆಟ್ಟದ ತುದಿಯಿಂದ ಕೊರೆಯುವ ಕೆಲಸವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಈಗಾಗಲೇ ಕಾರ್ಮಿಕರ ಕುಟುಂಬಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರ ಬಟ್ಟೆ ಮತ್ತು ಇತರ ವಸ್ತುಗಳು ಹಾಗು ಬ್ಯಾಗ್‌ಗಳೊಂದಿಗೆ ಸಿದ್ಧರಾಗಿರಿ ಎಂದು ಕುಟುಂಬ ಸದಸ್ಯರಿಗೆ ಹೇಳಿದ್ದಾರೆ. ಸುರಂಗದಿಂದ ಕಾರ್ಮಿಕರನ್ನು ಹೊರತರಲು ಎನ್‌ಡಿಆರ್‌ಎಫ್ ಸಿಬ್ಬಂದಿ ಈಗಾಗಲೇ ಅಣಕು ಡ್ರಿಲ್ ನಡೆಸಿದ್ದಾರೆ. ಹೊರಬಂದ ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಸಿಲ್ಕ್ಯಾರದಿಂದ 30 ಕಿಮೀ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ತಾತ್ಕಾಲಿಕ ವಾರ್ಡ್ ಸಿದ್ಧಪಡಿಸಲಾಗಿದೆ. ಕಾರ್ಮಿಕರನ್ನು ಸ್ಥಳಾಂತರಿಸಲು ಸುರಂಗದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಯಾಗಿದೆ.
ಕಳೆದ 16 ದಿನಗಳಿಂದ ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಎಂಡೋಸ್ಕೋಪಿ ಮಾದರಿಯ ಕ್ಯಾಮೆರಾವನ್ನು ಸುರಂಗದೊಳಗೆ ಕಳುಹಿಸಲಾಗಿತ್ತು. ಸದ್ಯ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಮತ್ತು ಪಾನೀಯಗಳನ್ನು ಪೈಪ್ ಮೂಲಕ ಕಳುಹಿಸಲಾಗುತ್ತಿದೆ. ವಾಕಿಟಾಕಿಗಳ ಮೂಲಕ ಸಂತ್ರಸ್ತರೊಂದಿಗೆ ಅಧಿಕಾರಿಗಳು ಮಾತನಾಡುತ್ತಿದ್ದಾರೆ.
ಕಾರ್ಮಿಕರ ಮಾನಸಿಕ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರೋಬೋಟ್‌ಗಳನ್ನು ಸಹ ನಿಯೋಜಿಸಲಾಗುತ್ತಿದೆ. ಈ ರೋಬೋಟ್‌ಗಳು ಕೆಲಸಗಾರರ ಆರೋಗ್ಯದ ಮೇಲ್ವಿಚಾರಣೆಯೊಂದಿಗೆ ಇಂಟರ್ನೆಟ್ ಸೇವೆಗಳನ್ನೂ ಒದಗಿಸುತ್ತಿವೆ. ಅವುಗಳು ಮೀಥೇನ್‌ನಂತಹ ಹಾನಿಕಾರಕ ಅನಿಲ ಸುರಂಗದಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸುತ್ತವೆ. ಲಖನೌದಲ್ಲಿ ಕಟ್ಟಡ ಕುಸಿತದ ಅವಘಡದಲ್ಲಿ 14 ಮಂದಿ ಸಿಲುಕಿದ್ದರು. ಆಗ ಅವರನ್ನು ರಕ್ಷಿಸಿದ್ದ ರೀತಿಯಲ್ಲೇ ಇವರನ್ನೂ ಸಹ ಆದಷ್ಟು ಬೇಗ ರಕ್ಷಸಲಿದ್ದೇವೆ. ಈಗಾಗಲೇ ಕೆಲಸ ಆರಂಭಿಸಿದ್ದೇವೆ ಎಂದು ರೊಬೊಟಿಕ್ಸ್ ತಜ್ಞ ಮಿಲಿಂದ್ ರಾಜ್ ತಿಳಿಸಿದರು.
ಇದನ್ನೂ ಓದಿ: ಕೈಕೊಟ್ಟ ಯಂತ್ರ; ಮನುಷ್ಯ ಸಾಮರ್ಥ್ಯದಿಂದಲೇ ಸುರಂಗ ಕೊರೆಯುವ ಕೆಲಸ ಶುರು