ಡೆಹ್ರಾಡೂನ್ (ಉತ್ತರಾಖಂಡ): ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉತ್ತರಾಖಂಡ ಪ್ರವಾಹ ಹಾಗೂ ಭೂಕುಸಿತಕ್ಕೆ ತುತ್ತಾಗಿತ್ತು. ಇದೀಗ ವರುಣನ ಆರ್ಭಟ ನಿಂತು ಹಿಮಪಾತ ಆರಂಭವಾಗಿದೆಯಾದರೂ ಮಳೆ ಸಂಬಂಧಿತ ಅವಘಡಗಳಿಂದ ಮೃತಪಟ್ಟವರ ಶವಗಳು ಪತ್ತೆಯಾಗುತ್ತಲೇ ಇದೆ.
ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 72ಕ್ಕೆ ಏರಿಕೆಯಾಗಿದ್ದು, ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 224ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದೆ. ನೈನಿತಾಲ್ ಜಿಲ್ಲೆಯೊಂದರಲ್ಲೆ 42 ಸಾವು ವರದಿಯಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ವರುಣಾರ್ಭಟ: ಕುಟುಂಬಸ್ಥರ ಕಣ್ಣೆದುರಿಗೇ ಕೊಚ್ಚಿ ಹೋದ ವ್ಯಕ್ತಿ
ಮೃತಪಟ್ಟವರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಉತ್ತರಾಖಂಡ ಸರ್ಕಾರ ಘೋಷಿಸಿದೆ. ಅಲ್ಲದೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಕ್ಟೋಬರ್ ತಿಂಗಳ ತಮ್ಮ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (CMRF) ನೀಡುವುದಾಗಿ ಘೋಷಿಸಿದ್ದಾರೆ.
ಅಕ್ಟೋಬರ್ 17 ರಿಂದ ಎನ್ಡಿಆರ್ಎಫ್, ಭಾರತೀಯ ವಾಯುಪಡೆ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದ್ದವು. ಇದೀಗ ಮಳೆ ಅವಾಂತರ ಕಡಿಮೆಯಾಗಿದ್ದು, ಎಸ್‌ಡಿಆರ್‌ಎಫ್ ತನ್ನ ಕಾರ್ಯಾಚರಣೆ ಮುಂದುವರೆಸಿದೆ.