ಪ್ರತಾಪ್ಗಢ( ಉತ್ತರ ಪ್ರದೇಶ): ಇಡೀ ಜಗತ್ತಿನಾದ್ಯಂತ ಕೋವಿಡ್ ತಲ್ಲಣವನ್ನೇ ಸೃಷ್ಟಿಸಿದೆ. ಈ ವೇಳೆ ಪ್ರತಾಪ್ಗಢ ಜಿಲ್ಲೆಯ ಜುಹಿ ಶುಕುಲ್ಪುರ ಗ್ರಾಮಸ್ಥರು ನಿರ್ಮಾಣ ಮಾಡಿದ್ದ ಕೊರೊನಾ ಮಾತೆಯ ದೇವಾಲಯವನ್ನು ಧ್ವಂಸ ಮಾಡಲಾಗಿದೆ.
ಜನರು ಮೂಢನಂಬಿಕೆಗೆ ಸಿಲುಕಬಾರದು ಎಂಬ ಕಾರಣದಿಂದ ಜಿಲ್ಲಾಡಳಿತವೇ ದೇವಾಲಯವನ್ನು ತೆರವುಗೊಳಿಸಿದೆ. ಸಂಗೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದೇವಾಲಯವಿದ್ದು, ಪ್ರಯಾಗರಾಜ್ ವಲಯದ ಐಜಿಪಿ ಕೆ.ಪಿ.ಸಿಂಗ್ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಈ ದೇವಾಲಯ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಲಾಗಿದೆ ಎಂದಿದ್ದಾರೆ.
ಕೊರೊನಾ ಮಾತೆಗೆ ಪೂಜೆ ಮಾಡುವುದರಿಂದ ಕೊರೊನಾ ಹರಡುವುದಿಲ್ಲ ಎಂಬುದು ಜನರ ಅಭಿಪ್ರಾಯವಾಗಿದ್ದು, ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಕೋವಿಡ್ನಿಂದಾಗಿ ಗ್ರಾಮದಲ್ಲಿ ಈವರೆಗೆ ಮೂವರು ಮೃತಪಟ್ಟಿದ್ದು, ಇದರಿಂದಾಗಿ ಭೀತಿಗೊಂಡ ಗ್ರಾಮಸ್ಥರು, ದೇಣಿಗೆ ಸಂಗ್ರಹಿಸಿ ಜೂನ್ 7ರಂದು ಕೊರೊನಾ ಮಾತೆ ದೇಗುಲ ನಿರ್ಮಿಸಿದ್ದರು.
ಬೇವಿನ ಮರದ ಪಕ್ಕ ಕೊರೊನಾ ಮಾತೆಯನ್ನು ಪ್ರತಿಷ್ಠಾಪಿಸಿದ್ದ ಜನ ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರಸಾದ ಅರ್ಪಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದರು.
ಇದನ್ನೂ ಓದಿ: ಕೋವಿಡ್ ಹೊಡೆದೋಡಿಸಲು ನಿರ್ಮಾಣವಾಯ್ತು ಕೊರೊನಾ ಮಾತಾ ದೇಗುಲ: ಹೀಗಿತ್ತು ಭಕ್ತರ ಪರಾಕಾಷ್ಠೆ!!
ಕೊರೊನಾ ಮಾತೆಗೆ ಮಾಸ್ಕ್ ಹಾಕಲಾಗಿದ್ದು, ದೇವರನ್ನು ಸ್ಪರ್ಶಿಸಬಾರದು ಎಂದು ಭಕ್ತರಿಗೆ ಸೂಚನೆ ನೀಡಲಾಗಿತ್ತು. ಜೊತೆಗೆ ಹಳದಿ ಹೂಗಳನ್ನು ಮಾತ್ರ ದೇವಿಗೆ ಅರ್ಪಿಸಲು ಹೇಳಲಾಗಿತ್ತು.
ಅರ್ಚಕನ ಸಮರ್ಥನೆ
ದೇವಾಲಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೊಮ್ಮೆ ಪ್ರತಿಕ್ರಿಯೆ ನೀಡಿದ್ದ ದೇವಾಲಯದ ಅರ್ಚಕ, ''ಇದಕ್ಕೂ ಮೊದಲು ಚೆಚಕ್ ಮಾತಾ (ಸಿಡುಬು ಮಾತೆ) ದೇವಾಲಯ ನಿರ್ಮಾಣ ಮಾಡಿ, ಸಿಡುಬು ಕಾಯಿಲೆಯನ್ನು ಓಡಿಸಿದ ಹಾಗೆಯೇ ಈಗ ಕೊರೊನಾ ಮಾತೆ ದೇವಾಲಯ ನಿರ್ಮಾಣ ಮಾಡಿ ಕೊರೊನಾ ಓಡಿಸಲಾಗುತ್ತದೆ'' ಎಂದು ದೇವಾಲಯ ನಿರ್ಮಾಣ ವಿಚಾರವನ್ನು ಸಮರ್ಥನೆ ಮಾಡಿಕೊಂಡಿದ್ದ.