ಉನ್ನಾವೋ(ಉತ್ತರ ಪ್ರದೇಶ) : ಒಂದು ಕಾಲದಲ್ಲಿ ಪೊಲೀಸರೆಂದರೇ ಮಕ್ಕಳು ಭಯದ ಜೊತೆಗೆ ಚಳಿಜ್ವರ ಬಂದವರಂತೆ ಆಡುತ್ತಿದ್ದರು. ಆದರೆ ಈಗ ಜನಸ್ನೇಹಿ ಪೊಲೀಸರು ವಿದ್ಯಾರ್ಥಿಗಳು ಹಾಗೂ ಜನರಿಗೆ ತುಂಬಾನೆ ಹತ್ತಿರವಾಗುತ್ತಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಇಲ್ಲೋರ್ವ ಪ್ರೀತಿಯ ಪೊಲೀಸಪ್ಪ ಮಕ್ಕಳ ಕಣ್ಣಲ್ಲಿ ಭಾವನಾತ್ಮಕತೆಯ ಕಣ್ಣೀರು ತರಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಸುತ್ತಲೂ ವಿದ್ಯಾರ್ಥಿಗಳು ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಇರುವಂತೆ ವರ್ಗಾವಣೆಗೊಂಡ ಪೊಲೀಸ್ ಟೀಚರ್ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಆ ವೇಳೆ ಅವರನ್ನು ಬಿಟ್ಟುಕೊಡದ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಪೊಲೀಸ್ ಅಧಿಕಾರಿಗೆ ಇದೆ. ಹೀಗಾಗಿ ಅವರನ್ನು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಲೇ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಎಲ್ಲರನ್ನು ಒಂದು ಕ್ಷಣ ದುಃಖಿತರನ್ನಾಗಿಸುತ್ತದೆ.
ಹೆಚ್ಚಿನ ವಿವರ: ಸಚಿನ್ ಕೌಶಿಕ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ರೋಹಿತ್ ಕುಮಾರ್ ಯಾದವ್ ಅವರು ಉನ್ನಾವೋದ ಸರ್ಕಾರಿ ರೈಲ್ವೆ ಪೊಲೀಸ್ (GRP) ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದು, ಸೆಪ್ಟೆಂಬರ್ 2018 ರಿಂದ ಸಿಕಂದರಪುರ ಕರ್ನ್ ಬ್ಲಾಕ್‌ನ ಸುಮಾರು 125 ಮಕ್ಕಳಿಗೆ ತಮ್ಮ ಕರ್ತವ್ಯ ಮುಗಿಸಿಕೊಂಡು ಬಂದು ಪಾಠ ಮಾಡುತ್ತಿದ್ದರು. ಇತ್ತೀಚೆಗೆ, ಅವರನ್ನು ಝಾನ್ಸಿಯ ಸಿವಿಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ರೋಹಿತ್ ಅವರು 2005 ರಲ್ಲಿ ಉತ್ತರ ಪ್ರದೇಶ ಪೊಲೀಸ್ ಪಡೆಗೆ ಸೇರಿದ್ದರು.
ಈ ಶಾಲೆ ಆರಂಭಿಸಿದ್ದು ಏಕೆ?: 'ಬಡ ರೈತರ ಮಕ್ಕಳಿಗಾಗಿ 1986 ರಲ್ಲಿ ಇಟಾವಾದಲ್ಲಿನ ನಮ್ಮ ಹುಟ್ಟೂರು ಮುದೈನಾದಲ್ಲಿ ಶಾಲೆಯನ್ನು ತೆರೆದಿದ್ದ ನಮ್ಮ ತಂದೆ ಚಂದ್ರಪ್ರಕಾಶ್ ಯಾದವ್ ಅವರ ಹಾದಿಯನ್ನೇ ನಾನು ಅನುಸರಿಸಿದ್ದೇನೆ. ನಾನು 2018 ರಲ್ಲಿ ಉನ್ನಾವ್‌ಗೆ ಬಂದಾಗ ಕೊರಾರಿ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಮಕ್ಕಳು ಭಿಕ್ಷೆ ಬೇಡುವುದನ್ನು ಆಗಾಗ್ಗೆ ನೋಡುತ್ತಿದ್ದೆ. ಅವರ ಪೋಷಕರೊಂದಿಗೆ ಮಾತನಾಡಿದ ನಂತರ ನಾನು ರೈಲ್ವೆ ನಿಲ್ದಾಣದ ಪಕ್ಕದಲ್ಲಿ 'ಹರ್ ಹಾಥ್ ಮೇ ಕಲಾಂ ಪಾಠಶಾಲಾ' ಎಂಬ ಬಯಲು ಶಾಲೆಯನ್ನು ಪ್ರಾರಂಭಿಸಿದೆ. ನನ್ನ ಸಂಬಳದಲ್ಲಿ ತಿಂಗಳಿಗೆ 8,000 ರೂ.ಗಳನ್ನು ಪುಸ್ತಕ, ಲೇಖನ ಸಾಮಗ್ರಿಗಳು ಮತ್ತು ಮಕ್ಕಳಿಗೆ ಬಟ್ಟೆ ವ್ಯವಸ್ಥೆ ಕಲ್ಪಿಸಲು ಖರ್ಚು ಮಾಡುತ್ತಿದ್ದೆ. ಇದು ಸ್ವಯಂಪ್ರೇರಿತ ಪ್ರಯತ್ನವಾದ್ದರಿಂದ, ನನ್ನ ಕರ್ತವ್ಯದ ಸಮಯದ ನಂತರ ನಾನು ತರಗತಿಗಳನ್ನು ನಡೆಸುತ್ತೇನೆ' ಎಂದು ಹೇಳಿದ್ದಾರೆ.
ಉನ್ನಾವೊದ ಅಂದಿನ ಜಿಲ್ಲಾ ಪರೀಕ್ಷಾಧಿಕಾರಿ ರಾಜೇಂದ್ರ ಕುಮಾರ್ ಅವರು ಈ ಮಾಹಿತಿ ಪಡೆದು ತರಗತಿಗಳನ್ನು ನಡೆಸಲು ಕೊರಾರಿ ಕಲನ್ ಗ್ರಾಮದಲ್ಲಿ ಪಂಚಾಯತ್ ಕಚೇರಿಯನ್ನು ನನಗೆ ನೀಡಿದ್ದರು. ನಂತರ ಇನ್ನೂ ಕೆಲವು ನನ್ನಂತಹ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪಾಠ ಮಾಡಲು ನನ್ನೊಂದಿಗೆ ಸೇರಿಕೊಂಡರು ಎಂದು ರೋಹಿತ್ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಕ್ಸಾಮ್ ಪಾಸ್ ಮಾಡಲು ಚರ್ಮ ಕಿತ್ತು ಮತ್ತೊಬ್ಬನ ಬೆರಳಿಗೆ ಅಂಟಿಸಿದ.. ಸ್ಯಾನಿಟೈಜರ್ನಿಂದ ಸಿಕ್ಕು ಬಿದ್ದ