ಮಹೋಬಾ (ಉತ್ತರ ಪ್ರದೇಶ): ಪುರಾತನ ಭಾರತದಲ್ಲಿ ಪತಿ ಮರಣ ಹೊಂದಿದರೆ ಆತನ ಚಿತೆಗೆ ಹಾರಿ ಸತಿಯೂ ತನ್ನ ಪ್ರಾಣ ಅರ್ಪಿಸುತ್ತಿದ್ದ ಅಮಾನವೀಯ ಪದ್ಧತಿ ಜಾರಿಯಲ್ಲಿತ್ತು. ಇಂಥ ಮೂಢನಂಬಿಕೆ ಕಾಲಾನಂತರ ರಾಜಾರಾಮ್ ಮೋಹನ್‌ರಾಯ್ ಅವರ ಅವಿರತ ಶ್ರಮದ ಫಲವಾಗಿ ನಶಿಸಿಹೋಯಿತು. ಆದರೆ, ಅದನ್ನು ನೆನಪಿಸುವ ಘಟನೆ ಜರುಗಿದ್ದು, ಇದು ಸ್ವಲ್ಪ ವಿಭಿನ್ನ ಎಂದೇ ಹೇಳಬಹುದು.
ಇಲ್ಲಿ ವ್ಯಕ್ತಿ ತನ್ನ ಪತ್ನಿಯ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ಮಹೋಬಾ ಜಿಲ್ಲೆಯ ಕುಲ್ಪಹಾಡ್ ಕೊಟ್ವಾಲಿ ಪ್ರದೇಶದ ಜೈತ್‌ಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಸ್ಥಳೀಯರು ಆತನನ್ನು ರಕ್ಷಿಸುವ ಹೊತ್ತಿಗೆ ಅತನ ದೇಹದ ಕೆಲವು ಭಾಗಗಳು ಸುಟ್ಟಿದ್ದವಂತೆ. ನಂತರ ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮದುವೆ ಕಾರ್ಡ್‌ನಲ್ಲಿ 'ಸಂವಿಧಾನ ಉಳಿಸಿ' ಎಂದು ಮುದ್ರಿಸಿದ ಕೈ ನಾಯಕ
ಬ್ರಿಜೇಶ್ ಎಂದು ಗುರುತಿಸಲಾದ ವ್ಯಕ್ತಿಯ ಪತ್ನಿ ಉಮಾ ಆತ್ಮಹತ್ಯೆ ಮಾಡಿಕೊಂಡ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಉಮಾ ಶುಕ್ರವಾರ ತನ್ನ ಪತಿಯಿಂದ 5000 ರೂ ಕೇಳಿದ್ದರಂತೆ. ಅದಕ್ಕೆ ಪತಿ ಬೆಳಗ್ಗೆ ಕೊಡುವುದಾಗಿ ಹೇಳಿದ್ದನಂತೆ. ಇದರಿಂದ ಅಸಮಾಧಾನಗೊಂಡ ಆಕೆ ಅದೇ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ವರದಕ್ಷಿಣೆಗಾಗಿ ಉಮಾಳನ್ನು ಆಕೆಯ ಪತಿ ಮತ್ತು ಅತ್ತೆಯವರೇ ಕೊಂದಿದ್ದಾರೆ ಎಂದು ಉಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಕ್ಷುಲ್ಲಕ ಸಣ್ಣ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ನಿಧನದ ನಂತರ ತನಗೆ ಬದುಕಲು ಇಷ್ಟವಿಲ್ಲ ಎಂದು ಬ್ರಿಜೇಶ್ ಈ ರೀತಿ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.