ಬಹು ಅಂಗಾಂಗ ವೈಫಲ್ಯದಿಂದ ಬಳಲುತಿದ್ದ ಕಲ್ಯಾಣ್ ಸಿಂಗ್ ಇಂದು ಕೊನೆಯುಸಿರೆಳೆದಿದ್ದಾರೆ. ಅವರು ರಾಜಕೀಯದಲ್ಲಿ ನಡೆದು ಬಂದ ಹಾದಿಯ ಒಂದು ವರದಿ ಇಲ್ಲಿದೆ.
ಕಲ್ಯಾಣ್ ಸಿಂಗ್ ಜನನ
ಮಾಜಿ ಸಿಎಂ ಕಲ್ಯಾಣ್ಸಿಂಗ್ ಜನವರಿ 5, 1932 ರಲ್ಲಿ ಉತ್ತರಪ್ರದೇಶದ ಅಲಿಗಢದ ಕೃಷಿ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಿಂದಲೂ ಹಿಂದುತ್ವವನ್ನು ಹೆಚ್ಚು ಇಷ್ಟ ಪಡುತ್ತಿದ್ದ ಇವರು, ಆರ್ಎಸ್ಎಸ್ಗೆ ಸೇರಿದರು. ಮೊದಲಿಗೆ ಜನಸಂಘ ಪಕ್ಷ ಸೇರಿದ ಅವರು, ನಂತರದ ದಿನಗಳಲ್ಲಿ ಜನತಾ ಪಕ್ಷ ಸೇರಿದರು. ಬಳಿಕ ಬಿಜೆಪಿ ಸೇರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು.
ಆರಂಭಿಕ ಸೋಲಾದರೂ, ಮುಂದೆ ಹಿಂದಿರುಗಿ ನೋಡಲಿಲ್ಲ
30ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿದ ಇವರು ಆರಂಭದಲ್ಲಿ ಸೋಲು ಕಂಡರು. 1967ರಲ್ಲಿ ಅಟ್ರೌಲಿಯಾ ಕ್ಷೇತ್ರದಿಂದ ಕಾಂಗ್ರೆಸ್ ವಿರುದ್ಧ ತಮ್ಮ ಮೊದಲ ಗೆಲುವನ್ನು ದಾಖಲಿಸಿದ ಅವರು, ಮುಂದಿನ 13 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿದರು. 1980ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ವರ್ ಖಾನ್ ವಿರುದ್ಧ ಸೋತರೂ,1985ರಲ್ಲಿ ನಡೆದ ಚುನಾವಣೆಯಲ್ಲಿ ಮರಳಿ ಅಧಿಕಾರದ ಚುಕ್ಕಾಣಿ ಹಿಡಿದರು. ಅಂದಿನಿಂದ 2004ರವರೆಗೆ ಅವಿರೋಧ ಆಯ್ಕೆಯಾಗಿ ಕ್ಷೇತ್ರದ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದರು.
ಸಿಂಗ್ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು
ಕಲ್ಯಾಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯು 1991ರ ವಿಧಾನಸಭಾ ಚುನಾವಣೆಯನ್ನು ಎದುರಿಸಿ 221 ಸ್ಥಾನಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವನ್ನು ದಾಖಲಿಸಿತು. ಸಿಂಗ್ ಅವರ ವರ್ಚಸ್ಸಿನಿಂದಾಗಿ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲು ಕಾರಣವಾಯಿತು.
ಬಾಬ್ರಿ ಮಸೀದಿ ಧ್ವಂಸದ ನೈತಿಕ ಹೊಣೆ ಹೊತ್ತು ರಾಜೀನಾಮೆ
ಅದೇ ವರ್ಷ ಅವರು ಸಿಎಂ ಆಗಿ ಆಡಳಿತ ನಡೆಸಿದರು. ಆದರೆ, 1992ರಲ್ಲಿ ಉತ್ತರಪ್ರದೇಶ ಬಾಬ್ರಿ ಮಸೀದಿ ಧ್ವಂಸಕ್ಕೆ ಸಾಕ್ಷಿಯಾಯಿತು. ಇದರ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಸಿಂಗ್ ರಾಜೀನಾಮೆ ನೀಡಲು ಮುಂದಾದರು.
ಬಿಎಸ್ಪಿ ಜತೆ ಮೈತ್ರಿ.. ಕೈಕೊಟ್ಟ ಮಾಯಾವತಿ
1993ರಲ್ಲಿ ಅತ್ರೌಲಿ ಮತ್ತು ಕಸ್ಗಂಜ್ ಕ್ಷೇತ್ರಗಳ ಜನರು ಅವರನ್ನು ತಮ್ಮ ಶಾಸಕರಾಗಿ ಆಯ್ಕೆ ಮಾಡಿದರು. ಪಕ್ಷಗಳ ಪೈಕಿ ಬಿಜೆಪಿಯ ಮತಗಳ ಪ್ರಮಾಣವು ಅತ್ಯಧಿಕವಾಗಿದ್ದರೂ, ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸೇರಿ ಮೈತ್ರಿ ಸರ್ಕಾರ ರಚಿಸಿದರು. ಈ ಸಮಯದಲ್ಲಿ ಸಿಂಗ್ ವಿಪಕ್ಷ ನಾಯಕರಾಗಿದ್ದರು. ಈ ಸಮಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿಯು ಬಿಎಸ್ಪಿಯೊಂದಿಗೆ ಸೇರಿ ಸರ್ಕಾರ ರಚಿಸಿತು. ಬಿಎಸ್ಪಿಯ ಮಾಯಾವತಿ ಮೊದಲ ಆರು ತಿಂಗಳ ಅವಧಿಗೆ ಸಿಎಂ ಆಗಿ ರಾಜ್ಯವನ್ನಾಳಿದರು. ಇನ್ನೇನು ಬಿಜೆಪಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಬಿಎಸ್ಪಿ ತನ್ನ ಬೆಂಬಲ ಹಿಂಪಡೆಯಿತು.
ಸ್ವತಂತ್ರ ಪಕ್ಷ ಸ್ಥಾಪಿಸಿದ ಕಲ್ಯಾಣ್ ಸಿಂಗ್
1990ರ ದಶಕದ ಕೊನೆಯಲ್ಲಿ ಸಿಂಗ್ ರಾಷ್ಟ್ರ ರಾಜಕೀಯದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು. ಆದರೂ, ಬಿಜೆಪಿ ನಿಷ್ಠಾವಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು 1999ರಲ್ಲಿ ಪಕ್ಷದಿಂದ ಹೊರ ಬಂದರು. ಐದು ವರ್ಷಗಳ ಬಳಿಕ ಮತ್ತೆ ಭಾರತೀಯ ಜನತಾ ಪಕ್ಷವನ್ನು ಸೇರಿದರು. ಬುಲಂದ್‌ಶಹರ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. 2009ರಲ್ಲಿ ಆಂತರಿಕ ವೈಷಮ್ಯದಿಂದಾಗಿ ಅವರು ಮತ್ತೆ ಬಿಜೆಪಿ ತೊರೆದರು. ಅದೇ ವರ್ಷ ಉತ್ತರಪ್ರದೇಶದ ಇಟಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ನಂತರ, ಅವರು ತಮ್ಮದೇ ಪಕ್ಷವಾದ ಜನ ಕ್ರಾಂತಿ ಪಕ್ಷವನ್ನು (ರಾಷ್ಟ್ರವಾದಿ) ಸ್ಥಾಪಿಸಿದರು.
ಬಿಜೆಪಿ ಜತೆ ಜೆಕೆಪಿ ವಿಲೀನ
2014ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಆಗಿನ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ನಿರಂತರ ಪ್ರಯತ್ನದ ನಂತರ ಸಿಂಗ್ ತನ್ನ ಜೆಕೆಪಿ (ಆರ್) ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಕೇಸರಿ ಪಕ್ಷವು ಆ ವರ್ಷ ಆಗಸ್ಟ್ 26ರಂದು ಅವರಿಗೆ ರಾಜಸ್ಥಾನದ ರಾಜ್ಯಪಾಲರ ಸ್ಥಾನವನ್ನು ನೀಡಿತು. ಜನವರಿ 2015ರಲ್ಲಿ, ಅವರಿಗೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು.
ಇದನ್ನೂ ಓದಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶ