ಪಣಜಿ(ಗೋವಾ): ದೇಶದ ಅತಿ ಸಣ್ಣ ರಾಜ್ಯ ಗೋವಾ ವಿಧಾನಸಭೆಗೂ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಆಡಳಿತಾರೂಢ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುತ್ತಿದೆ. ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡದ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಪಕ್ಷವು ಪ್ರಶ್ನಾರ್ಹ, ಕಳಂಕಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡ್ತಿದೆ ಎಂದು ಆರೋಪಿಸಿದ್ದಾರೆ. ಪಣಜಿ ಕ್ಷೇತ್ರದಿಂದ ಅತ್ಯಾಚಾರಿಗಳು, ಕ್ರಿಮಿನಲ್ಗಳಿಗೆ ಟಿಕೆಟ್ ನೀಡಬಹುದಾಗಿದೆ, ಆದರೆ ನನ್ನಂತಹ ಶುದ್ಧ ವ್ಯಕ್ತಿಗೆ ಏಕೆ ಟಿಕೆಟ್ ನೀಡುತ್ತಿಲ್ಲ? ಎಂದು ಕೋಪಗೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ಗೋವಾ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಕೇವಲ ಮನೋಹರ್ ಪರಿಕ್ಕರ್ ಅವರ ಪುತ್ರ ಎಂಬ ಕಾರಣಕ್ಕಾಗಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೂ ತಿರುಗೇಟು ನೀಡಿರುವ ಅವರು, ಪರಿಕ್ಕರ್ ಅವರ ಮಗ ಎಂಬ ಕಾರಣಕ್ಕಾಗಿ ನಾನು ಟಿಕೆಟ್ ಕೇಳುವುದಾಗಿದ್ದರೆ ಕಳೆದ ಚುನಾವಣೆಯಲ್ಲೇ ಪಕ್ಷಕ್ಕೆ ಒತ್ತಾಯಿಸುತ್ತಿದ್ದೆ ಎಂದಿದ್ದಾರೆ.
ಕಳೆದ 30 ವರ್ಷಗಳಿಂದ ಪಣಜಿ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದ್ದು, 2019ರಲ್ಲಿ ಮನೋಹರ್ ಪರಿಕ್ಕರ್ ಅವರ ನಿಧನದ ಬಳಿಕ ಪಣಜಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಟಾನ್ಸಿಯೊ ಗೆಲುವು ದಾಖಲಿಸಿದ್ದರು, ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘಿಸಿ ಬೃಹತ್ ಕಾರ್ಯಕ್ರಮ: ಸಮಾಜವಾದಿ ಪಕ್ಷದ ವಿರುದ್ಧ ಎಫ್ಐಆರ್
ಮುಂಬರುವ ಚುನಾವಣೆಯಲ್ಲಿ ಉತ್ಪಲ್ ಪರಿಕ್ಕರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಅಮಿತ್ ಶಾ, ಉತ್ಪಲ್ ಅವರನ್ನು ದೆಹಲಿಗೆ ಕರೆಯಿಸಿ, ಸಮಾಧಾನಪಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.