ಬೆಂಗಳೂರು: ಎಲೆಕ್ಟ್ರಾನಿಕ್ ಸಿಗರೇಟ್‌ಗಳ ಅಪಾಯವನ್ನು ಮನಗಂಡ ಕೇಂದ್ರ ಸರ್ಕಾರ ಈಗಾಗಲೇ ಇ ಸಿಗರೇಟ್ (ಎಲೆಕ್ಟ್ರಾನಿಕ್ ಸಿಗರೇಟ್) ಉತ್ಪನ್ನದ ಮಾರಾಟ ಮತ್ತು ಬಳಕೆ ನಿಷೇಧಿಸಿದೆ. ಈ ನಿಯಮಗಳನ್ನು ಮಾಧ್ಯಮಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜೊತೆಗೆ ಇದರ ನಿಬಂಧನೆಗಳು ಉಲ್ಲಂಘನೆ ಆಗದಂತೆ ನೋಡಿಕೊಂಡು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಧ್ಯಮಗಳಿಗೆ ಸೂಚಿಸಿದೆ.
ಕೆಲವು ಪ್ರಮುಖ ಮಾಧ್ಯಮಗಳು ಇ ಸಿಗರೇಟುಗಳನ್ನು ಉತ್ತೇಜಿಸಲು ಮುಂದಾಗಿದೆ ಎಂಬುದು ನವದೆಹಲಿಯಲ್ಲಿ ನಡೆದ ವ್ಯಾಪಾರ ಶೃಂಗ ಸಭೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ಕೂಡ ಬಂದಿದೆ. ಈ ಸಂಬಂಧ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸೇರಿದಂತೆ ಎಲ್ಲ ಮಾಧ್ಯಮಗಳಿಗೆ ಸಚಿವಾಲಯ ತಿಳಿಸಿದೆ.
ನಿಯಮ ಮೀರಿದವರಿಗೆ ಎಚ್ಚರಿಕೆ: ಎಲೆಕ್ಟ್ರಾನಿಕ್ ಸಿಗರೇಟ್‌ಗಳ ನಿಷೇಧ (ಉತ್ಪಾದನೆ, ಉತ್ಪಾದನೆ, ಆಮದು, ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತು) ಕಾಯ್ದೆ 2019 ಜಾರಿಗೆ ತರಲಾಗಿದೆ. ಈ ಕಾಯ್ದೆ ಅನುಸಾರ ಎಲೆಕ್ಟ್ರಾನಿಕ್ ಸಿಗರೇಟುಗಳ ಬಳಕೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉತ್ತೇಜಿಸುವ ಜಾಹೀರಾತುಗಳನ್ನು ನಿಷೇಧಿಸುತ್ತದೆ. ಒಂದು ವೇಳೆ ನಿಯಮ ಮೀರಿ ಈ ವಸ್ತುಗಳ ಉತ್ತೇಜಿಸುವ ಜಾಹೀರಾತು ಪ್ರಸಾರಗಳಿಗೆ 1 ವರ್ಷ ಶಿಕ್ಷೆ ಅಥವಾ 1 ಲಕ್ಷ ದಂಡ ಅಥವಾ ಇವೆರಡನ್ನು ವಿಧಿಸಬಹುದಾಗಿದೆ.
ಈ ಹಿನ್ನಲೆ ಈ ರೀತಿಯ ಜಾಹೀರಾತು ಅಥವಾ ಯಾವುದೇ ಪ್ರಚಾರ ಅಥವಾ ಇತರ ಪ್ರಚಾರಗಳ ಮೂಲಕ ಉಲ್ಲಂಘಿದಂತೆ ನೋಡಿಕೊಳ್ಳುವ ಕೆಲಸಗಳನ್ನು ನಡೆಸಬೇಕಿದೆ ಎಂದು ಸಚಿವಾಲಯ ತಿಳಿಸಿದೆ.
ಏನಿದು ಇ ಸಿಗರೇಟ್: ಇ ಸಿಗರೇಟುಗಳು ಹೆಚ್ಚಿನ ನಿಕೋಟಿನ್ ಅಂಶವನ್ನು ಹೊಂದಿದ್ದು, ಇದು ಬ್ಯಾಟರಿ ಚಾಲಿತ ಸಾಧನವಾಗಿದೆ. ಇದರಲ್ಲಿ ತಂಬಾಕು ಇರುವುದಿಲ್ಲ ಆದರೆ, ನಿಕೋಟಿನ್ ಅಂಶ ಹೆಚ್ಚಾಗಿರುತ್ತದೆ. ಇದು ಸಿಗರೇಟ್ ಸೇದಿದ ಅನುಭೂತಿಯನ್ನು ನೀಡಿದರು ಇವು ಶ್ವಾಸಕೋಶದ ಕೋಶಗಳನ್ನು ಹಾನಿ ಮಾಡುತ್ತದೆ. ಯುವ ಜನರಲ್ಲಿ ಹೆಚ್ಚಿನ ವ್ಯಸನಕ್ಕೆ ಕಾರಣವಾಗುವ ಇದು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರುವಂತೆ ಪ್ರಸ್ತಾಪವನ್ನು ಮೋದಿ ನೇತೃತ್ವದ ಸರ್ಕಾರ ಮುಂದೆ ಇರಿಸಲಾಗಿತ್ತು.
ಈ ಹಿನ್ನಲೆ ಸಂವಿಧಾನದ 47 ನೇ ಪರಿಚ್ಛೇದದ ಪ್ರಕಾರ ಸಾರ್ವಜನಿಕ ಆರೋಗ್ಯದ ಒಟ್ಟಾರೆ ಹಿತದೃಷ್ಟಿಯಿಂದ, ಎಲ್ಲ ರೀತಿಯ ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣಾ ವ್ಯವಸ್ಥೆಗಳು, ಹೀಟ್ ನಾಟ್ ಬರ್ನ್ ಪ್ರಾಡಕ್ಟ್ಸ್, ಇ-ಹುಕ್ಕಾ ಸೇರಿದಂತೆ ಇ-ಸಿಗರೇಟ್ಗಳನ್ನು ನಿಷೇಧಿಸಲು ನಿರ್ಧರಿಸಿತು. ಭವಿಷ್ಯದ ಆತಂಕ ಗಮನಿಸಿದ ಕೇಂದ್ರ ಸರ್ಕಾರ ಈ ಉತ್ಪನ್ನಗಳ ಮಾರಾಟ, ರಫ್ತು, ಆಮದು, ವಿತರಣೆ ಮತ್ತು ಜಾಹೀರಾತಿಗೆ ನಿರ್ಬಂಧ ವಿಧಿಸಿದೆ. ಅಲ್ಲದೇ, ಈ ನಿರ್ಬಂಧಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಕೂಡ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಚೀತಾ ಉದಯ್ ಸಾವಿಗೆ ಮೂತ್ರಪಿಂಡ ಸೋಂಕು ಕಾರಣ: ವರದಿ