ನವದೆಹಲಿ: ಭಾರತದಲ್ಲಿರುವ ಅಮೆರಿಕ ಮಿಷನ್ 2022ರಲ್ಲಿ ದಾಖಲೆಯ 82 ಸಾವಿರ ವಿದ್ಯಾರ್ಥಿಗಳಿಗೆ ವೀಸಾ ನೀಡಿದೆ. ಇದು ಅಮೆರಿಕದಲ್ಲಿ ಓದುತ್ತಿರುವ ಎಲ್ಲ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ ಶೇ 20 ರಷ್ಟು ಭಾರತೀಯರೇ ಇದ್ದಾರೆ ಎಂದು ಭಾರತದಲ್ಲಿರುವ ಯುಎಸ್ ಮಿಷನ್ ಹೇಳಿದೆ.
COVID-19 ಸಾಂಕ್ರಾಮಿಕದಿಂದಾಗಿ ಹಿಂದಿನ ವರ್ಷ ವೀಸಾ ನೀಡಿಕೆಯಲ್ಲಿ ವಿಳಂಬವಾಗಿತ್ತು. ಆದರೆ ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವೀಸಾ ಸಿಕ್ಕಿದ್ದು, ಅವರೆಲ್ಲ ಆಯಾಯ ವಿವಿಗಳನ್ನು ತಲುಪಲು ಸಾಧ್ಯವಾಗಿದೆ. ಇದು ನಮಗೆ ಸಂತಸ ತಂದಿದೆ ಎಂದು ಯುಎಸ್ ಮಿಷನ್ ಹೇಳಿದೆ. ಈ ಬೇಸಿಗೆಯಲ್ಲಿ ಮಾತ್ರ ನಾವು 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದೇವೆ. ಇದು ಈ ಹಿಂದಿನ ವರ್ಷಕ್ಕಿಂತ ಹೆಚ್ಚು, ಅಮೆರಿಕ ರಾಯಭಾರ ಕಚೇರಿಯ ಚಾರ್ಜ್ ಡಿ'ಅಫೇರ್ಸ್ ಪೆಟ್ರೀಷಿಯಾ ಲಸಿನಾ ಹೇಳಿದ್ದಾರೆ.
ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನಲ್ಲಿರುವ ನಾಲ್ಕು ಕಾನ್ಸುಲೇಟ್‌ಗಳು ಮೇ ನಿಂದ ಆಗಸ್ಟ್‌ವರೆಗೆ ವಿದ್ಯಾರ್ಥಿ ವೀಸಾ ಅರ್ಜಿಗಳ ಪ್ರಕ್ರಿಯೆಗೆ ಆದ್ಯತೆ ನೀಡಿದ್ದವು. ಸಾಧ್ಯವಾದಷ್ಟು ಅರ್ಹ ವಿದ್ಯಾರ್ಥಿಗಳಿಗೆ ವೀಸಾ ನೀಡುತ್ತಿದ್ದು, ನಿಗದಿತ ಸಮಯಕ್ಕೆ ಅಧ್ಯಯನಕ್ಕಾಗಿ ಸಂಬಂಧಪಟ್ಟ ವಿವಿಗಳನ್ನು ತಲುಪಲು ಅಮೆರಿಕ ರಾಯಭಾರ ಕಚೇರಿ ಶ್ರಮವಹಿಸಿತ್ತು.
ಹೆಚ್ಚಿನ ಭಾರತೀಯ ಕುಟುಂಬಗಳಿಗೆ ಅಮೆರಿಕ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಬೇಡಿಕೆಯಿರುವ ದೇಶವಾಗಿದೆ ಎಂಬುದನ್ನು ಈ ಪ್ರಕ್ರಿಯೆ ತೋರಿಸಿದೆ. 2021 ರಲ್ಲಿ ಓಪನ್ ಡೋರ್ಸ್ ವರದಿ ಪ್ರಕಾರ, 2020-2021 ಶೈಕ್ಷಣಿಕ ವರ್ಷದಲ್ಲಿ ಭಾರತದಿಂದ 167,582 ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಇದನ್ನು ಓದಿ:ಭಾರತ್ ಜೋಡೋ ಯಾತ್ರೆ: 2ನೇ ದಿನದ ಪಯಣ ಅಗಸ್ತೇಶ್ವರಂನಿಂದ ಆರಂಭ