ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಅಧಿಕೃತ ಪ್ರವಾಸದ ನಡುವೆ ಭಾರತ- ಅಮೆರಿಕ ದೇಶಗಳ ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು ನಿರ್ಮಾಣವಾಗಿದೆ. ಅಮೆರಿಕದ ಪ್ರತಿಷ್ಟಿತ ವಿಮಾನ ಇಂಜಿನ್ ಪೂರೈಕೆದಾರ ಕಂಪನಿ ಜಿಇ ಏರೋಸ್ಪೇಸ್ ಗುರುವಾರ ಹೆಚ್ಎಎಲ್ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತೀಯ ವಾಯುಪಡೆಗೆ ಲಘು ಯುದ್ಧ ವಿಮಾನ (ಎಲ್‌ಸಿಎ) ಎಂಕೆ– 11 ತೇಜಸ್‌ಗಾಗಿ ಫೈಟರ್ ಜೆಟ್ ಇಂಜಿನ್‌ಗಳನ್ನು ಜಂಟಿಯಾಗಿ ತಯಾರಿಸುವ ಸಂಬಂಧ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಿಇ ಏರೋಸ್ಪೇಸ್ ತಿಳಿಸಿದೆ. ಈ ಒಪ್ಪಂದವು ಭಾರತದಲ್ಲಿ ಜಿಇ ಏರೋಸ್ಪೇಸ್‌ನ F414 ಎಂಜಿನ್‌ಗಳ ಜಂಟಿ ಉತ್ಪಾದನೆಯನ್ನು ಒಳಗೊಂಡಿದೆ. ಓಹಿಯೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಏರೋಸ್ಪೇಸ್ ಕಂಪನಿಯು ಇದಕ್ಕೆ ಅಗತ್ಯವಾದ ರಫ್ತು ಸರಕುಗಳನ್ನು ಪಡೆಯಲು ಅಮೆರಿಕ ಸರ್ಕಾರದೊಂದಿಗೆ ಕೆಲಸ ಮಾಡಲಿದೆ ಎಂದು ಪ್ರಕಟಿಸಿದೆ. ಈ ಪ್ರಯತ್ನವು IAFನ ಲಘು ಯುದ್ಧ ವಿಮಾನ (LAC) Mk2 ಕಾರ್ಯಕ್ರಮದ ಭಾಗ ಎಂದು ಮಾಹಿತಿ ನೀಡಿದೆ.
ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರ ಬಲಪಡಿಸುವಲ್ಲಿ ಹೆಚ್‌ಎಎಲ್ ಜೊತೆಗಿನ ತಿಳುವಳಿಕೆ ಒಪ್ಪಂದವು ಪ್ರಮುಖ ಅಂಶವಾಗಿದೆ ಎಂದು ಜಿಇ ತಿಳಿಸಿದೆ. ಭಾರತ ಮತ್ತು ಎಚ್‌ಎಎಲ್‌ನೊಂದಿಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಿಂದ ಇದು ಐತಿಹಾಸಿಕ ಒಪ್ಪಂದ ಸಾಧ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಇ ಏರೋಸ್ಪೇಸ್‌ನ ಸಿಇಒ ಹೆಚ್. ಲಾರೆನ್ಸ್ ಕಲ್ಪ್ ಜೂನಿಯರ್ ಬಣ್ಣಿಸಿದರು.
ಗುಣಮಟ್ಟದ ಇಂಜಿನ್‌ಗಳ ಉತ್ಪಾದನೆಗೆ ಸಹಾಯ: ನಮ್ಮ F414 ಇಂಜಿನ್‌ಗಳು ಎರಡೂ ದೇಶಗಳಿಗೆ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಪ್ರಯೋಜನಗಳನ್ನು ನೀಡುತ್ತವೆ. ನಮ್ಮ ಗ್ರಾಹಕರು ತಮ್ಮ ಮಿಲಿಟರಿ ವಾಹನಗಳ ಅಗತ್ಯತೆಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ಇಂಜಿನ್‌ಗಳನ್ನು ಉತ್ಪಾದಿಸಲು ನಾವು ಸಹಾಯ ಮಾಡುತ್ತೇವೆ ಎಂದು ಜಿಇ ಭರವಸೆ ನೀಡಿದೆ.
ಇದನ್ನೂ ಓದಿ: ಕಪ್ಪು ಸಮುದ್ರದಲ್ಲಿ ಅಮೆರಿಕದ ಡ್ರೋನ್ ಉರುಳಿಸಿದ ರಷ್ಯಾದ ಫೈಟರ್ ಜೆಟ್
ಜಿಇ ಏರೋಸ್ಪೇಸ್ ಭಾರತದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿದೆ. 1986ರಲ್ಲಿ ಇದು ಭಾರತದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು HALನೊಂದಿಗೆ F404 ಇಂಜಿನ್‌ಗಳೊಂದಿಗೆ LCA ಅಭಿವೃದ್ಧಿಯನ್ನು ಬೆಂಬಲಿಸಲು ಕೆಲಸ ಪ್ರಾರಂಭಿಸಿತು. ಕಂಪನಿಯ F404 ಮತ್ತು F414 ಎಂಜಿನ್‌ಗಳು ಪ್ರಸ್ತುತ LCA Mk1 ಮತ್ತು LCA Mk2 ಕಾರ್ಯಕ್ರಮಗಳ ಭಾಗವಾಗಿದೆ. ಒಟ್ಟಾರೆಯಾಗಿ 75 F404 ಎಂಜಿನ್‌ಗಳನ್ನು ವಿತರಿಸಲಾಗಿದೆ. ಇನ್ನೂ 99 LCA Mk1Aಗಾಗಿ ಬೇಡಿಕೆ ಇದೆ. LCA Mk2ಗಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಎಂಟು F414 ಎಂಜಿನ್‌ಗಳನ್ನು ವಿತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರ ನೀಡಿದೆ.
ಇದನ್ನೂ ಓದಿ: ಉಕ್ರೇನ್ಗೆ ಮಿಗ್ 29 ಫೈಟರ್ ಜೆಟ್ ನೀಡಲು ಒಪ್ಪಿದ ಸ್ಲೋವಾಕಿಯಾ