ಲಖನೌ(ಉತ್ತರ ಪ್ರದೇಶ): ವಾಟ್ಸಾಪ್ ಸಂದೇಶದ ಮೂಲಕ ತಮಗೆ ಪಾಕಿಸ್ತಾನದಿಂದ ಪ್ರಾಣ ಬೆದರಿಕೆ ಬಂದಿದೆ ಎಂದು ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಮುಖ್ಯಸ್ಥ ವಾಸೀಮ್ ರಿಜ್ವಿ ತಿಳಿಸಿದ್ದಾರೆ. ಈ ಕುರಿತು ಉತ್ತರ ಪ್ರದೇಶದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದು ಪಾಕಿಸ್ತಾನದಿಂದ ಬಂದ ಬೆದರಿಕೆ ಕರೆ ಎಂದು ಆರೋಪಿಸಿ ವಾಸೀಮ್ ರಿಜ್ವಿ ಮೊದಲು ಮುಖ್ಯಮಂತ್ರಿಗಳ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು. ನಂತರ, ಈ ಪ್ರಕರಣವನ್ನು ಕೊತ್ವಾಲಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ರಿಜ್ವಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬೆದರಿಕೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ವಾಸೀಮ್ ರಿಜ್ವಿಯ ಕಾರಿನ ಚಾಲಕ ಪತ್ನಿ ಖಾಸೀಂ ರಿಜ್ವಿಯ ವಿರುದ್ಧ ಕಿರುಕುಳ ಆರೋಪ ಹೊರೆಸಿ, ದೂರು ದಾಖಲಿಸಿದ್ದಳು. ಇದಾದ ನಂತರ ಏಪ್ರಿಲ್ 29ರಂದು, ಬಿಹಾರ ಮೂಲದ ವ್ಯಕ್ತಿಯಿಂದ ತನಗೆ ಕೊಲೆ ಬೆದರಿಕೆ ಬಂದಿದೆ ಎಂದು ರಿಜ್ವಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಮೈಸೂರಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಸೋಂಕು ಪ್ರಕರಣ ಪತ್ತೆ
ವ್ಯಕ್ತಿಯೋರ್ವ ವಿಡಿಯೋ ಸಂದೇಶ ಕಳುಹಿಸಿ ನನ್ನನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಹಾಕಿದ್ದಾನೆ ಎಂದು ರಿಜ್ವಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಲಖನೌನ ಶಹಾದತ್‌ಗಂಗ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು,
ರಿಜ್ವಿಯ ಮೇಲೆ ಏಕೆ ಕೊಲೆ ಬೆದರಿಕೆ?
ಕೆಲವು ತಿಂಗಳುಗಳ ಹಿಂದೆ ಕುರಾನ್ ಬಗ್ಗೆ ಮಾತನಾಡಿ ವಾಸೀಮ್ ರಿಜ್ವಿ ವಿವಾದಕ್ಕೆ ಸಿಲುಕಿದ್ದರು. ಕುರಾನ್ ಈ ನೆಲದ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಭಯೋತ್ಪಾದನೆಯನ್ನು ಕುರಾನ್ ಉತ್ತೇಜಿಸುತ್ತದೆ ಎಂದು ಆರೋಪಿಸಿದ ಅವರು ಕುರಾನ್ನಲ್ಲಿರುವ 26 ಅಂಶಗಳನ್ನು ತೆಗೆದು ಹಾಕುವಂತೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಆದರೆ ಸುಪ್ರೀಂಕೋರ್ಟ್ ವಾಸೀಂ ರಿಜ್ವಿಯ ಮನವಿಯನ್ನು ವಜಾಗೊಳಿಸಿತು. ಅಂದಿನಿಂದ ವಾಸೀಂ ರಿಜ್ವಿ ವ್ಯಾಪಕ ಟೀಕೆಗಳಿಗೆ ಒಳಗಾಗುತ್ತಿದ್ದಾರೆ. ಕುರಾನ್ನಲ್ಲಿ ಬದಲಾವಣೆ ಬಯಸಿದ ಕಾರಣದಿಂದಲೇ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ.