ಬರೇಲಿ (ಉತ್ತರ ಪ್ರದೇಶ): ಮದುವೆ ಆಗಿ ಎರಡು ದಿನದ ನಂತರ ಮಹಿಳೆ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿರುವುದಕ್ಕೆ ಕುಪಿತಗೊಂಡ ತಂದೆ, ಸೋದರಮಾವ ಆ್ಯಸಿಡ್ ಎರಚಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಅಗ್ರಾಸ್ ಗ್ರಾಮದಲ್ಲಿ ನಡೆದಿದೆ.
ಮದುವೆಯಾದ ಎರಡು ದಿನಗಳ ನಂತರ ತಂದೆ ಮತ್ತು ಸೋದರ ಮಾವ ಸೇರಿ ಮಹಿಳೆ ಮೇಲೆ ಆಸಿಡ್ ಎರಚಿದ್ದರಿಂದ ತೀವ್ರವಾದ ಸುಟ್ಟ ಗಾಯಗಳಾಗಿವೆ. ಮಹಿಳೆಯ ಪ್ರೇಮ ವಿಚಾರ ಗೊತ್ತಾಗುತ್ತಿದ್ದಂತೆ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಘಟನೆಯ ವಿವರ ನೀಡಿದ್ದಾರೆ.
ಏಪ್ರಿಲ್ 25 ರಂದು ಮಹಿಳೆ ತೀವ್ರ ಗಾಯಗೊಂಡು ಆಗ್ರಾಸ್ ಗ್ರಾಮಕ್ಕೆ ಹೋಗುವ ರಸ್ತೆಯ ಕಾಡಿನಲ್ಲಿ ಪತ್ತೆಯಾದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತಕ್ಷಣ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮಹಿಳೆಯ ಪ್ರೇಮ ಪ್ರಕರಣದ ಬಗ್ಗೆ ತಿಳಿದ ನಂತರ ತಂದೆ ಇತರ ಮೂವರು ಸಂಬಂಧಿಕರು ಸೇರಿಕೊಂಡು ಮಹಿಳೆ ಮೇಲೆ ಆಸಿಡ್ ದಾಳಿಗೆ ಯತ್ನಿಸಿದ್ದರು ಎಂಬ ವಿಚಾರವನ್ನು ಪೊಲೀಸರ ಎದುರು ಗಾಯಗೊಂಡ ಮಹಿಳೆ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಮದುವೆಯ ಮೊದಲು ಮಹಿಳೆ ಪ್ರೇಮವಿಚಾರ ಪ್ರಸ್ತಾಪವನ್ನೂ ತಂದೆ ಹಾಗೂ ಸೋದರಮಾವ ವಿರೋಧಿಸಿದ್ದರು. ಮದುವೆ ಆದ ನಂತರವೂ ಮಹಿಳೆ ತನ್ನ ಪ್ರಿಯಕರನ ಜತೆ ಮೊಬೈಲ್ನಲ್ಲಿ ಮಾತನಾಡುತ್ತಿರುವುದಕ್ಕೆ ಕುಪಿತಗೊಂಡ ತಂದೆ ಹಾಗೂ ಸೋದರಮಾವ, ಅತ್ತೆ ಸೇರಿಕೊಂಡು ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಎರಚಿ ಚಿತ್ರಹಿಂಸೆ ನೀಡಿದ್ದಾರೆ. ವಿಚಾರಣೆ ನಡೆಸಿದ ವೇಳೆ ಈ ಕೃತ್ಯ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತಂದೆ ತೋಟರಾಮ್ ಮತ್ತು ಆಕೆಯ ಸೋದರಮಾವ ದಿನೇಶ್ ನನ್ನು ಪೊಲೀಸರು ವಶಕ್ಕೆ ಬಂಧಿಸಿದ್ದು, ಇನ್ನಿಬ್ಬರ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಇನ್ನಿಬ್ಬರ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಬಾಲಕಿ ಆತ್ಮಹತ್ಯೆ:ಅಪರಾಧಿಗೆ ಶಿಕ್ಷೆ(ವಿಜಯವಾಡ): ಬಾಲಕಿ ಮೇಲೆ ಪ್ರತಿದಿನ ಲೈಂಗಿಕ ದೌರ್ಜನ್ಯ ನಡೆಸಿ ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎರಡು ತಿಂಗಳಿಂದ ಪ್ರತಿದಿನ ಅವಾಚ್ಯ ಶಬ್ಧಗಳಿಂದ ಕಿರುಕುಳ ನೀಡುತ್ತಿರುವುದನ್ನು ತಾಳಲಾರದೇ ಅಪಾರ್ಟ್ಮೆಂಟ್ ಮೇಲಿಂದ ಹಾರಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ವಿನೋದ್ ಕುಮಾರ್ ಜೈನ್ (49)ಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ವಿಜಯವಾಡ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಎಸ್.ರಜಿನಿ ಬುಧವಾರ ತೀರ್ಪು ನೀಡಿದ್ದಾರೆ.
ಈ ಎಲ್ಲ ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿಗೊಳಿಸಿ, ಸಂತ್ರಸ್ತ ಕುಟುಂಬಕ್ಕೆ 3 ಲಕ್ಷ ಮತ್ತು 2.4 ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಈ ಪ್ರಕರಣವನ್ನು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಸಾವಿಗೆ ಕಾರಣವಾದ ಮತ್ತು ಆಕೆಯ ಪೋಷಕರನ್ನು ಭಾವನಾತ್ಮಕವಾಗಿ ಸಂಕಷ್ಟಕ್ಕೆ ಸಿಲುಕಿಸುವ ಘೋರ ಅಪರಾಧ ಎಂದು ಪರಿಗಣಿಸಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂಓದಿ: ಮಾರ್ಕೆಟ್ ಮಧ್ಯದಲ್ಲಿ ಜೆಡಿಯು ನಾಯಕನನ್ನು ಗುಂಡುಕ್ಕಿ ಕೊಂದ ಹಂತಕರು