ಲಖನೌ (ಉತ್ತರಪ್ರದೇಶ) : ಕೇಂದ್ರ ಸರ್ಕಾರದ ಅಕ್ಕಿ ಬಲವರ್ಧನೆ ಯೋಜನೆಯಡಿ 15.05 ಕೋಟಿ ಫಲಾನುಭವಿಗಳಿಗೆ 'ಬಲವರ್ಧಿತ ಅಕ್ಕಿ' ವಿತರಿಸಲು ಅನುಕೂಲವಾಗುವಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಬ್ಲೆಂಡರ್‌ಗಳನ್ನು ಅಳವಡಿಸಿರುವ ರಾಜ್ಯದ ಅಕ್ಕಿ ಗಿರಣಿಗಳಿಗೆ ಭತ್ತವನ್ನು ಹಂಚಿಕೆ ಮಾಡಲು ಪ್ರಾರಂಭಿಸಿದೆ.
ಪ್ರಮುಖವಾಗಿ, ಯೋಜನೆಯ ಎರಡನೇ ಹಂತದಲ್ಲಿ NFSA ವ್ಯಾಪ್ತಿಗೆ ಒಳಪಡುವ 12 ಕೋಟಿ ಫಲಾನುಭವಿಗಳಿಗೆ 46.10 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಹಂಚಿಕೆಯೊಂದಿಗೆ ರಾಜ್ಯದ 60 ಜಿಲ್ಲೆಗಳಲ್ಲಿ 64,365 ಪಡಿತರ ಅಂಗಡಿಗಳನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ, ಸಾರವರ್ಧಿತ ಅಕ್ಕಿ ವಿತರಣೆಯನ್ನು ವ್ಯಾಪಕವಾಗಿ ಹಂಚಿಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಬಲವರ್ಧಿತ ಅಕ್ಕಿ ಎಂದರೇನು? : ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳುವ ಪ್ರಕಾರ, ಆಹಾರದಲ್ಲಿ ಪೌಷ್ಟಿಕಾಂಶದ ಗುಣಮಟ್ಟವನ್ನ ಸುಧಾರಿಸಲು ಮತ್ತು ಆರೋಗ್ಯಕ್ಕೆ ಕನಿಷ್ಠ ಅಪಾಯದೊಂದಿಗೆ ಸಾರ್ವಜನಿಕ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಆಹಾರದಲ್ಲಿ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವುದನ್ನು ಬಲವರ್ಧನೆ ಎಂದು ವ್ಯಾಖ್ಯಾನಿಸಲಾಗಿದೆ.
ಸಾರವರ್ಧಿತ ಅಕ್ಕಿ ಬಳಸುವುದರಿಂದ ಆಹಾರದ ಜೊತೆಗೆ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಲಾಗುತ್ತದೆ. ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಈ ಸಾರವರ್ಧಿತ ಅಕ್ಕಿಯ ಸೇವನೆಯು ಒಂದೆಡೆಯಾದ್ರೆ, ಈ ಅಕ್ಕಿಯಲ್ಲಿ ಕಂಡುಬರುವ ಕಬ್ಬಿಣ, ಸತು, ಫೋಲಿಕ್ ಆಮ್ಲ, ವಿಟಮಿನ್-ಎ, ವಿಟಮಿನ್-ಬಿ ಇತ್ಯಾದಿಗಳು ದೇಹದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತವೆ.
ಮುಖ್ಯವಾಗಿ ಪೌಷ್ಟಿಕಾಂಶದ ವಿಚಾರಕ್ಕೆ ಬಂದ್ರೆ, ಬಲವರ್ಧಿತ ಅಕ್ಕಿ ಸಾಮಾನ್ಯ ಅಕ್ಕಿಗಿಂತ ಉತ್ಕೃಷ್ಟವಾಗಿದೆ, ಏಕೆಂದರೆ ಮಿಲ್ಲಿಂಗ್ ಮತ್ತು ಸಂಸ್ಕರಣೆಯು ಸಾಮಾನ್ಯವಾಗಿ ಸಾಮಾನ್ಯ ಅಕ್ಕಿಯಿಂದ ಕೊಬ್ಬು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ, ಆದರೆ, ಬಲವರ್ಧಿತ ಅಕ್ಕಿ ಈ ಎಲ್ಲ ಗುಣಗಳನ್ನು ಉಳಿಸಿಕೊಂಡಿದೆ. ವಿಟಮಿನ್ ಬಿ-1, ವಿಟಮಿನ್ ಬಿ-6, ವಿಟಮಿನ್ ಇ, ನಿಯಾಸಿನ್, ಕಬ್ಬಿಣ, ಸತು, ಫೋಲಿಕ್ ಆಮ್ಲ, ವಿಟಮಿನ್ ಬಿ-12 ಮತ್ತು ವಿಟಮಿನ್ ಎ ಗಳನ್ನು ಬಲವರ್ಧಿತ ಅಕ್ಕಿಯಲ್ಲಿ ಮಿಶ್ರಣ ಮಾಡುವ ಮೂಲಕ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧಗೊಳಿಸಲಾಗುತ್ತದೆ.
ಸರ್ಕಾರ ನೀಡಿದ ಅಂಕಿ - ಅಂಶಗಳ ಪ್ರಕಾರ, ಎನ್‌ಎಫ್‌ಎಸ್‌ಎ ಅಡಿಯಲ್ಲಿ 60 ಜಿಲ್ಲೆಗಳಲ್ಲಿ 64,365 ಪಡಿತರ ಅಂಗಡಿಗಳಿಗೆ ವಾರ್ಷಿಕ 46.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಹಂಚಿಕೆಯ ಮೂಲಕ 12 ಕೋಟಿ ಜನರು ಅಕ್ಕಿ ಬಲವರ್ಧನೆ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಮಾರ್ಚ್ 2024 ರೊಳಗೆ 79,365 ಪಡಿತರ ಅಂಗಡಿಗಳ ಮೂಲಕ 3.61 ಕೋಟಿ ಪಡಿತರ ಚೀಟಿದಾರರಿಗೆ ಸಾರವರ್ಧಿತ ಅಕ್ಕಿಯನ್ನು ಒದಗಿಸುವ ಗುರಿಯನ್ನು ಸಾಧಿಸಲು ಉತ್ತರ ಪ್ರದೇಶ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. 1,718 ಅಕ್ಕಿ ಗಿರಣಿಗಳಲ್ಲಿ ಬಲವರ್ಧಿತ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.
ಇದನ್ನೂ ಓದಿ : ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನಿರಾಕರಿಸಿದ ಕೇಂದ್ರದ ಕ್ರಮಕ್ಕೆ ಸಮಾನ ಮನಸ್ಕರ ಒಕ್ಕೂಟ ಖಂಡನೆ
ರಾಜ್ಯ ಸರ್ಕಾರದ ವಕ್ತಾರರ ಪ್ರಕಾರ, ಉತ್ತರ ಪ್ರದೇಶದಲ್ಲಿ ಜನರಿಗೆ ಸಾರವರ್ಧಿತ ಅಕ್ಕಿ ನೀಡುವ ಕೆಲಸವನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಐಸಿಡಿಎಸ್ ಮತ್ತು ಪಿಎಂ ಪೋಶನ್ ಯೋಜನೆಗಳನ್ನು ಮೊದಲ ಹಂತದಲ್ಲಿ ಮಾರ್ಚ್ 2022 ರವರೆಗೆ ಜಾರಿಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಹೆಚ್ಚಿನ ಹೊರೆ ಇರುವ ಜಿಲ್ಲೆಗಳಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಮೂರನೇ ಹಂತದಲ್ಲಿ 2024ರ ಮಾರ್ಚ್ ವೇಳೆಗೆ ಎಲ್ಲಾ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿಯ ಪ್ರಯೋಜನಗಳು ಜನರಿಗೆ ಸರಾಗವಾಗಿ ತಲುಪುವಂತೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ರಾಜ್ಯದ 73 ಜಿಲ್ಲೆಗಳಲ್ಲಿ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ.