ಉತ್ತರ ಪ್ರದೇಶ: ರಾಜ್ಯದ ಮೀರತ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಕಲಿ ವೈದ್ಯನೊಬ್ಬ ರಕ್ತನಾಳವನ್ನೇ ಕತ್ತರಿಸಿದ್ದು, ಮಹಿಳೆ ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಮಾವಾನಾ ಪಟ್ಟಣದ ಪರೀಕ್ಷಿತ್‌ಗಢ ರಸ್ತೆಯಲ್ಲಿರುವ ರತನ್ ನರ್ಸಿಂಗ್ ಹೋಂನಲ್ಲಿ ಘಟನೆ ನಡೆದಿದೆ.
ಮಾಹಿತಿ ಪ್ರಕಾರ, ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ನರ್ಸಿಂಗ್ ಹೋಮ್‌ಗೆ ಕರೆತರಲಾಗಿದೆ. ಹೆರಿಗೆ ಸಮಯದಲ್ಲಿ ನಕಲಿ ವೈದ್ಯ ಮಹಿಳೆಯ ರಕ್ತನಾಳಗಳ ಪೈಕಿ ಒಂದನ್ನು ಕತ್ತರಿಸಿದ್ದಾನೆ ಎನ್ನಲಾಗಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ತಾಯಿ-ಮಗು ಮೃತಪಟ್ಟಿದ್ದಾರೆ. ಇಬ್ಬರ ಸಾವಿಗೆ ವೈದ್ಯನ ನಿರ್ಲಕ್ಷ್ಯವೇ ಕಾರಣ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆ ಮುಂಭಾಗ ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರು ನರ್ಸಿಂಗ್ ಹೋಂ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆಯ ತೀವ್ರಗೊಳ್ಳುತ್ತಿದ್ದಂತೆ ವೈದ್ಯರು ಮತ್ತು ನರ್ಸಿಂಗ್ ಹೋಂ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾವಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುವುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ ಕಾಲ್ ಮೂಲಕ ಹೆರಿಗೆ.. ಆಸ್ಪತ್ರೆಯಲ್ಲಿ ತಾಯಿ-ಮಗು ಸಾವು
ಮಹಿಳೆಯ ಪತಿ ಕೃಷ್ಣ ದತ್ ಹೇಳಿದ್ದೇನು?: "ನನ್ನ ಪತ್ನಿ ಸೀಮಾಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಾವಾನಾ ಪಟ್ಟಣದಲ್ಲಿರುವ ರತನ್ ನರ್ಸಿಂಗ್ ಹೋಮ್‌ಗೆ ಸೇರಿಸಿದೆವು. ನರ್ಸಿಂಗ್ ಹೋಂ ಸಿಬ್ಬಂದಿ ಆಕೆಗೆ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮಾಡಬೇಕಾಗಿದೆ ಎಂದು ಹೇಳಿದರು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆಯ ರಕ್ತನಾಳವನ್ನು ಕತ್ತರಿಸಲಾಗಿದೆ. ನಿರಂತರ ರಕ್ತಸ್ರಾವವಾಗುತ್ತಿದ್ದ ಕಾರಣ ನನ್ನ ಪತ್ನಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು. ಆದಾದ ಕೆಲವೇ ನಿಮಿಷಗಳಲ್ಲಿ ಹೆಂಡತಿ ಮತ್ತು ಮಗು ಸಾವನ್ನಪ್ಪಿದೆ" ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಾ ಎಡವಟ್ಟು.. ಹೆರಿಗೆ ಅಪರೇಷನ್ ವೇಳೆ ಮಹಿಳೆ ಹೊಟ್ಟೆಯಲ್ಲಿ ಟವೆಲ್ ಬಿಟ್ಟ ವೈದ್ಯರು!
ಮಹಿಳೆಯ ಹೊಟ್ಟೆಯಲ್ಲಿ ಟವೆಲ್ ಬಿಟ್ಟ ವೈದ್ಯ: ಇದೇ ತಿಂಗಳ ಪ್ರಾರಂಭದಲ್ಲಿ ಉತ್ತರ ಪ್ರದೇಶದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಅಮ್ರೋಹ ಜಿಲ್ಲೆಯ ಸೈಫಿ ನರ್ಸಿಂಗ್ ಹೋಮ್ ವೈದ್ಯರು ಮಹಿಳೆಯೊಬ್ಬರಿಗೆ ಹೆರಿಗೆ ಆಪರೇಷನ್ ಮಾಡುತ್ತಿದ್ದ ವೇಳೆ ಟವೆಲ್ ಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಅಮ್ರೋಹದ ಗರ್ಗ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಅಪರೇಷನ್ ಮಾಡಿ ಹೊಟ್ಟೆಯಿಂದ ಟವೆಲ್ ಹೊರತೆಗೆಯಲಾಗಿತ್ತು.
ಇದನ್ನೂ ಓದಿ: ಮಂಗಳೂರು: ಹೊಟ್ಟೆಯಲ್ಲೇ ಮಗು ಸಾವು, ಸಂಜೆ ವೇಳೆಗೆ ತಾಯಿಯೂ ಮೃತ..ವೈದ್ಯರ ನಿರ್ಲಕ್ಷ್ಯ ಕಾರಣವಾಯ್ತಾ?