ನವದೆಹಲಿ : ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಬುಧವಾರ 59 ಕ್ಷೇತ್ರಗಳಲ್ಲಿ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ 624 ಅಭ್ಯರ್ಥಿಗಳ ಭವಿಷ್ಯ ನಾಳೆ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ಮುದ್ರೆಯೊತ್ತಲಿದೆ.
ಪಿಲಿಭಿತ್, ಲಖಿಂಪುರ ಖೇರಿ, ಸೀತಾಪುರ್, ಹರ್ದೋಯಿ, ಉನ್ನಾವೋ, ಲಖನೌ, ರಾಯ್ ಬರೇಲಿ, ಬಂದಾ ಮತ್ತು ಫತೇಪುರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.
ಲಖಿಂಪುರ ಖೇರಿ ಕ್ಷೇತ್ರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪ್ರತಿಷ್ಠೆಯೂ ಪಣಕ್ಕಿಡಲಿದೆ. ಅವರು ಸ್ಥಳೀಯ ಸಂಸದರಾಗಿದ್ದು, ಅಕ್ಟೋಬರ್ 3ರಂದು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅವರ ಪುತ್ರ ಆಶಿಶ್ ಮಿಶ್ರಾ ವಾಹನ ಹರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿಂಸಾಚಾರದ ಘಟನೆಯಲ್ಲಿ ಎಫ್‌ಐಆರ್‌ನಲ್ಲಿ ಅವರ ಮಗನ ಹೆಸರನ್ನು ನಮೂದಿಸಿದ ನಂತರ ಅವರು ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರದಿಂದ ಉಂಟಾದ ರಾಜಕೀಯ ಬಿಸಿಯಿಂದಾಗಿ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್‌ನಿಂದ ರವಿಶಂಕರ್ ತ್ರಿವೇದಿ, ಬಿಎಸ್‌ಪಿ ಮೋಹನ್ ಬಾಜಪೇಯಿ ಅವರನ್ನು ಕಣಕ್ಕಿಳಿಸಿದೆ. ಎಐಎಂಐಎಂನ ಮೊಹಮ್ಮದ್ ಉಸ್ಮಾನ್ ಸಿದ್ದಿಕಿ ಅವರೊಂದಿಗೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಖುಷಿ ಕಿನ್ನರ್ ಕೂಡ ಕಣದಲ್ಲಿದ್ದಾರೆ.
ಲಖನೌದ ಸರೋಜಿನಿನಗರ ಕ್ಷೇತ್ರವು ಈ ಹಂತದಲ್ಲಿ ಮತ್ತೊಂದು ಕುತೂಹಲದಿಂದ ವೀಕ್ಷಿಸಲ್ಪಟ್ಟಿದೆ. ಅಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಅವರು ಮಾಜಿ ಐಐಎಂ ಪ್ರಾಧ್ಯಾಪಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಅಭಿಷೇಕ್ ಮಿಶ್ರಾ ವಿರುದ್ಧ ಸ್ಪರ್ಧಿಸಿದ್ದಾರೆ.
ಲಖನೌ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ರಾಜ್ಯ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಎರಡು ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ ಅವರನ್ನು ಎದುರಿಸುತ್ತಿದ್ದಾರೆ. ಯುಪಿ ಸಚಿವ ಅಶುತೋಷ್ ಟಂಡನ್ ಅವರು ಲಖನೌ ಪೂರ್ವ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ಉತ್ತರಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ನಿತಿನ್ ಅಗರ್ವಾಲ್ ವಿರುದ್ಧ ಕಣದಲ್ಲಿದ್ದಾರೆ.
ರಾಜ್ಯವು ಕಾಂಗ್ರೆಸ್, ಭಾರತೀಯ ಜನತಾ ಪಕ್ಷ (ಬಿಜೆಪಿ), ಸಮಾಜವಾದಿ ಪಕ್ಷ (ಎಸ್‌ಪಿ)-ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪ್ರಮುಖ ಸ್ಪರ್ಧಿಗಳೊಂದಿಗೆ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.
ಕೊನೆಯ ಕ್ಷಣದ ಪ್ರಯತ್ನವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ರಾಯ್‌ಬರೇಲಿಯಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡುತ್ತಾ ಪುರೋಹಿತರು, ಸಾಧುಗಳ ಕಲ್ಯಾಣಕ್ಕಾಗಿ ರಾಜ್ಯದಲ್ಲಿ ಪುರೋಹಿತ ಕಲ್ಯಾಣ ಮಂಡಳಿಯನ್ನು ಪ್ರಾರಂಭಿಸಲಾಗುವುದು ಮತ್ತು ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಮಧ್ಯೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹರ್ದೋಯ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯು "ಧರ್ಮ, ಪಾಕಿಸ್ತಾನ ಮತ್ತು ಭಯೋತ್ಪಾದನೆ" ಕುರಿತು ಮಾತನಾಡುವ ಮೂಲಕ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಏಳು ಹಂತದ ಯುಪಿ ಚುನಾವಣೆಯ ಉಳಿದ ಮೂರು ಹಂತಗಳಿಗೆ ಫೆಬ್ರವರಿ 27, ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.
ಓದಿ: ಬೇಜವಾಬ್ದಾರಿಯುತ ಹೇಳಿಕೆಗಳನ್ನು ಬಿಜೆಪಿ ಸಹಿಸಲ್ಲ: ಈಶ್ವರಪ್ಪ 'ಕೇಸರಿ ಧ್ವಜ' ಸ್ಟೇಟ್ಮೆಂಟ್ಗೆ ನಡ್ಡಾ ಗರಂ