ಘಾಜಿಯಾಬಾದ್ (ಉತ್ತರ ಪ್ರದೇಶ): ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಮತ ಬೇಟೆಯು ಪರೋಕ್ಷವಾಗಿ ವೇಗ ಪಡೆದುಕೊಂಡಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಹಿಡಿದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವವರೆಗೆ ಭಾರತೀಯ ಜನತಾ ಪಕ್ಷವು 5 ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜನ ವಿಶ್ವಾಸ ಯಾತ್ರೆ ಮುಖಾಂತರ ನಿಮ್ಮ ಆಶೀರ್ವಾದ ಪಡೆಯಲು ನಾವು ನಿಮ್ಮ ನಗರಕ್ಕೆ ಬಂದಿದ್ದೇವೆ. ಬಿಜೆಪಿ ಐದು ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಹಾಗಾಗಿ, ಮತ್ತೊಮ್ಮೆ ನಿಮ್ಮ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯುಪಿಯನ್ನು ದೇಶದ ಮುಂಚೂಣಿ ರಾಜ್ಯವನ್ನಾಗಿ ಮಾಡಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮಲಗಿದ್ದ ಕೋಣೆಗೆ ಚಿಲಕ ಹಾಕಿ ಪತ್ನಿ ನಾಪತ್ತೆ; ಹುಡುಕಿಕೊಡುವಂತೆ ಪತಿ ಮನವಿ
ಈ ತಿಂಗಳ ಆರಂಭದಲ್ಲಿ ಯೋಗಿ, ಮಥುರಾದಲ್ಲಿ ಯಾತ್ರೆ ಪ್ರಾರಂಭಿಸಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಂದೇಲ್‌ಖಂಡ್‌ನ ಝಾನ್ಸಿಯಿಂದ ಪ್ರಾರಂಭವಾಗುವ ಯಾತ್ರೆಗೆ ಚಾಲನೆ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಪೂರ್ವ ಯುಪಿಯ ಅಂಬೇಡ್ಕರ್ ನಗರದಿಂದ ಯಾತ್ರೆಗೆ ಚಾಲನೆ ನೀಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪಶ್ಚಿಮ ಯುಪಿಯ ಬಿಜ್ನೋರ್‌ನ ಬಿದುರ್ಕೋಟಿಯಿಂದ ಯಾತ್ರೆಯನ್ನು ಪ್ರಾರಂಭಿಸಿದರೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪೂರ್ವ ಯುಪಿಯ ಬಲ್ಲಿಯಾದಿಂದ ಯಾತ್ರೆಯನ್ನು ಪ್ರಾರಂಭಿಸಿದ್ದರು. ಕೇಂದ್ರ ಸಚಿವೆ ಮತ್ತು ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರು ಗಾಜಿಪುರದಿಂದ ಯಾತ್ರೆಗೆ ಚಾಲನೆ ನೀಡಿದ್ದಾರೆ.