ಗೋರಖ್ಪುರ: ಕಲೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಗಣ್ಯರಿಗೆ ದೇಶದಲ್ಲಿ ನೀಡಬಹುದಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯೇ 'ಭಾರತ ರತ್ನ'. ಇಂತಹ ವಿಶೇಷ ಪ್ರಶಸ್ತಿಯನ್ನು ಪಡೆಯಲು ನಾನೂ ಅರ್ಹ, ಇದನ್ನು ನನಗೆ ನೀಡಬೇಕು ಎಂದು ಆಗ್ರಹಿಸಿ ವ್ಯಕ್ತಿಯೊಬ್ಬ ಸರ್ಕಾರಕ್ಕೆ ಪತ್ರ ಬರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗೋರಖ್ಪುರದ ನಿವಾಸಿ 39 ವರ್ಷದ ವಿನೋದ್ ಗುಮಾರ್ ಗೌರ್ ಎಂಬಾತ ಸ್ಥಳೀಯಾಡಳಿತಕ್ಕೆ ಈ ರೀತಿ ಪತ್ರ ಬರೆದಿದ್ದಾನೆ. "ಅಕ್ಟೋಬರ್ 10ರಂದು ಜಿಲ್ಲೆಯ ವಿಭಾಗೀಯ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ನಾನು ಪರಿಣತಿ ಹೊಂದಿದ್ದು, ಆಲ್‌ರೌಂಡರ್ ಆಗಿದ್ದೇನೆ. ಹಾಗಾಗಿ ನನಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಬೇಕು" ಎಂದು ಮನವಿ ಮಾಡಿದ್ದಾನೆ.
ಅಧಿಕಾರಿಗಳ ಪ್ರತಿಕ್ರಿಯೆ ಏನು?: ಈ ಪತ್ರವನ್ನು ಗಮನಿಸಿದ ಅಧಿಕಾರಿಗಳು ಹಗುರವಾಗಿ ಪರಿಗಣಿಸದೇ, ಪರಿಶೀಲನೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ರವಾನಿಸಿದ್ದಾರೆ. ತಹಶೀಲ್ದಾರ್ ಮಟ್ಟದಿಂದ ಜಿಲ್ಲಾಡಳಿತದವರೆಗೆ ಪತ್ರವನ್ನು ಕೂಲಕಂಶವಾಗಿ ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ, ಈ ಸಂಬಂಧ ಅಧಿಕಾರಿಗಳು ಕೋರಿದ್ದ ವರದಿ ತಿರಸ್ಕರಿಸಿದ ಗೋರಖ್ಪುರದ ಮಹ್ರಾಜಿ ಗ್ರಾಮದ ಲೇಖಪಾಲ್, ಅರ್ಜಿ ಸಲ್ಲಿಸಿದ ವ್ಯಕ್ತಿ ಪ್ರಶಸ್ತಿಗೆ ಅನರ್ಹ ಎಂದು ಪ್ರಮಾಣ ಪತ್ರ ನೀಡಿ, ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಯಾವುದೇ ವ್ಯಕ್ತಿ ಜಿಲ್ಲಾಡಳಿತಕ್ಕೆ ಬರೆದ ಪತ್ರವನ್ನು ಪರಿಶೀಲನೆ ಮಾಡಿ ಕ್ರಮವಹಿಸಬೇಕು. ವಿನೋದ್ ಕುಮಾರ್ ತಮಗೆ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿದಾಗ ಅವರು, ಪ್ರಶಸ್ತಿಗೆ ಅರ್ಹವಾಗುವಂತಹ ಯಾವುದೇ ಸಾಧನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಮಹ್ರಾಜಿ ಲೇಖಪಾಲ್ ಸಂದೀಪ್ ಕುಶ್ವಾ ಮಾತನಾಡಿ, ಈ ರೀತಿಯ ವಿಚಿತ್ರ ಪತ್ರಗಳನ್ನು ನಾವು ಕೆಲವು ಬಾರಿ ಪಡೆಯುತ್ತೇವೆ. ಕ್ಷೇತ್ರದಲ್ಲಿ ಪರಿಶೀಲನೆ ಮಾಡಿದಾಗ ವಿನೋದ್ ಮಾನಸಿಕವಾಗಿ ಸ್ವಸ್ಥನಾಗಿಲ್ಲ. ಇದೇ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾನೆ. ಇಲ್ಲದೇ ಹೋದಲ್ಲಿ ಈ ರೀತಿ ಬೇಡಿಕೆಯಿಟ್ಟು ಯಾರು ಜಿಲ್ಲಾಡಳಿತದ ಸಮಯ ವ್ಯರ್ಥ ಮಾಡುತ್ತಾರೆ? ಎಂದರು.
ವಿನೋದ್ ಕುಮಾರ್, 10ನೇ ತರಗತಿ ಪೂರ್ಣಗೊಳಿಸಿಲ್ಲ ಎಂದು ತಿಳಿದು ಬಂದಿದೆ. ಗೋರಖ್ಪುರ್ನಗರದಲ್ಲಿ ಮೆಕಾನಿಕ್ ಆಗಿದ್ದ ಈತ ಸಹೋದ್ಯೋಗಿಯೊಬ್ಬನ ಸಾವಿನ ಬಳಿಕ ಇದೀಗ ಇ-ರಿಕ್ಷಾ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಪತ್ರದಲ್ಲಿ ತಾನೊಬ್ಬ ಆಲ್‌ರೌಂಡರ್ ಆಗಿದ್ದೇನೆ, ಮೆಕಾನಿಕ್, ಡ್ರೈವರ್, ಕೃಷಿಕ, ಆಧ್ಯಾತ್ಮಕ ಚಿಂತಕ, ರಾಜಕೀಯ ವಿಶ್ಲೇಷಕ ಮತ್ತು ಸಂತನೆಂದು ಹೇಳಿದ್ದಾನೆ. ಸೆಪ್ಟೆಂಬರ್ 30ರಂದು ನಾನು ಧ್ಯಾನ ಮಾಡುವಾಗ ನನ್ನ ಅಂತರಾತ್ಮದ ಧ್ವನಿಯಲ್ಲಿ ಭಗವಂತ, ನೀನು ಭಾರತ ರತ್ನಕ್ಕೆ ಅರ್ಹ. ನೀನು ಇದನ್ನು ಪಡೆಯುತ್ತಿ ಎಂದು ಹೇಳಿದರು. ಹೀಗಾಗಿ ಅಕ್ಟೋಬರ್ನಲ್ಲಿ ಜಿಲ್ಲಾಡಳಿತಕ್ಕೆ ಪತ್ರ ಬರೆದೆ ಎಂದು ಆತ ತಿಳಿಸಿದ್ದಾನೆ. (ಐಎಎನ್ಎಸ್)
ಇದನ್ನೂ ಓದಿ: ಆಧುನಿಕ ವೈದ್ಯಕೀಯ ವ್ಯವಸ್ಥೆ ವಿರುದ್ಧ ತಪ್ಪು ದಾರಿಗೆಳೆಯುವ ಜಾಹೀರಾತು ನಿಲ್ಲಿಸಿ: ಪತಂಜಲಿಗೆ ಸುಪ್ರೀಂ ಚಾಟಿ