ಲಕ್ನೋ: ದೇಹದ ಖಾಸಗಿ ಅಂಗಗಳ ಮೇಲೆ ತನ್ನ ಹೆಸರು ಬರೆಸಿಕೊಳ್ಳುವಂತೆ ಯುವತಿಯೊಬ್ಬಳಿಗೆ ಬಲವಂತ ಮಾಡಿ ಹಾಗೂ ನಂತರ ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ 25 ವರ್ಷದ ನರ್ಸಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಆರೋಪಿಯು ಯುವತಿಗೆ ಚಾಕು ತೋರಿಸಿ ಬೆದರಿಸಿದ್ದ. ತಾನು ಹೇಳಿದ್ದನ್ನು ಒಪ್ಪದಿದ್ದರೆ ಆಕೆಯ ಪೋಷಕರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಹೀಗಾಗಿ 21 ವರ್ಷದ ಸಂತ್ರಸ್ತೆಯ ಪೋಷಕರು ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿ ಲಕ್ನೋದ ಖಾಸಗಿ ಸಂಸ್ಥೆಯಲ್ಲಿ ನರ್ಸಿಂಗ್ ಕೋರ್ಸ್ ಓದುತ್ತಿದ್ದಾರೆ. ಪ್ರಸ್ತುತ ಇಬ್ಬರೂ ಮಾಲ್ ಪ್ರದೇಶದ ಸಿಎಚ್‌ಸಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.
ಪೊಲೀಸ್ ಅಧಿಕಾರಿ ಚಿರಂಜೀವ್ ನಾಥ್ ಸಿನ್ಹಾ ಮಾಹಿತಿ: ಆರೋಪಿ ಅವೇಂದ್ರ ಸೋನ್ವಾಲಿ ಎಂಬಾತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ನಂತರ ಆಕೆಯ ಮೊಬೈಲ್ ಸಂಖ್ಯೆ ಪಡೆದಿದ್ದಾನೆ. ವಾಟ್ಸಾಪ್ ಕರೆಗಳ ಮೂಲಕ ಆಕೆಯೊಂದಿಗೆ ಮಾತನಾಡಲು ಪ್ರಾರಂಭಿಸಿದ. ತಾನು ಆಕೆಯನ್ನು ಪ್ರೀತಿಸುವುದಾಗಿ ಮತ್ತು ಮದುವೆಯಾಗಲು ಬಯಸುವುದಾಗಿ ಆತ ತಿಳಿಸಿದ್ದಾನೆ. ಇದಕ್ಕೆ ಯುವತಿ ಯಾವುದೇ ಸೊಪ್ಪು ಹಾಕಿಲ್ಲ. ಇಷ್ಟಕ್ಕೆ ಸುಮ್ಮನಾಗದ ಆತ ಯುವತಿ ಉಳಿದುಕೊಂಡಿದ್ದ ಕೋಣೆಗೆ ಹೋಗಿ ಚಾಕು ತೋರಿಸಿ ಬೆದರಿಸಿ ಆಕೆಯ ಕೆಲ ಅಶ್ಲೀಲ ವಿಡಿಯೊ ಮಾಡಿಕೊಂಡಿದ್ದಾನೆ. ನಂತರ ತನ್ನನ್ನು ಮದುವೆಯಾಗಲು ಒಪ್ಪದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾರಂಭಿಸಿದ್ದಾನೆ.
ಇತ್ತೀಚೆಗೆ ಆತ ಮತ್ತೆ ವಿಡಿಯೊ ಕಾಲ್ ಮಾಡಿ, ನೀನು ನನ್ನನ್ನು ಮದುವೆಯಾಗದಿದ್ದರೆ ನಿನ್ನ ತಂದೆ ತಾಯಿಯನ್ನು ಕೊಲ್ಲುವೆ ಎಂದು ಬೆದರಿಸಿದ್ದಾನೆ. ನಂತರ ವಿಡಿಯೊ ಕಾಲ್ನಲ್ಲಿ ಆಕೆಗೆ ರಕ್ತ ತೋರಿಸುವಂತೆ ಒತ್ತಾಯಿಸಿದ್ದಾನೆ. ಜೊತೆಗೆ ಆತ ಇದೆಲ್ಲವನ್ನೂ ರೆಕಾರ್ಡ್ ಮಾಡಿದ್ದಾನೆ.
ನಂತರ ವಿಡಿಯೊ ಕಾಲ್ನಲ್ಲಿ ಆಕೆ ಬ್ಲೇಡ್ ತೆಗೆದುಕೊಂಡು ತನ್ನ ಕೈ ಹಾಗೂ ಎದೆಯ ಮೇಲೆ ಗಾಯ ಮಾಡಿಕೊಳ್ಳುವಂತೆ ಮಾಡಿದ್ದಾನೆ. ನಂತರ ಆತ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ. ಈ ಸುದ್ದಿ ಯುವತಿಯ ಪೋಷಕರಿಗೆ ತಿಳಿದಾಗ ಅವರು ಎಫ್‌ಐಆರ್ ದಾಖಲಿಸಿದ್ದಾರೆ.
ಸೋಮವಾರ ಬಾಲಕಿಯ ಹೇಳಿಕೆಯನ್ನು ಪೊಲೀಸರು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿಕೊಂಡಿದ್ದೇವೆ, ಅದರ ಆಧಾರದ ಮೇಲೆ ಆತನನ್ನು ಬಂಧಿಸಿದ್ದೇವೆ ಎಂದು ಸಿನ್ಹಾ ಹೇಳಿದರು.
ಇದನ್ನೂ ಓದಿ: ಎಚ್ಚರಿಕೆ ನೀಡಿದರೂ ತಾಯಿಯೊಂದಿಗೆ ವಿವಾಹೇತರ ಸಂಬಂಧ.. ವ್ಯಕ್ತಿ ಗುಪ್ತಾಂಗವನ್ನೇ ಕತ್ತರಿಸಿದ ಮಗಳು!