ಲಖನೌ(ಉತ್ತರಪ್ರದೇಶ): ಗೋರಖ್ಪುರದ ಹೋಟೆಲ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಉದ್ಯಮಿ ಮನೀಷ್ ಗುಪ್ತಾ ಅವರ ಸಾವಿನ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ಈಗಾಗಲೇ ಈ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಆರಂಭಿಸುವವರೆಗೂ ಉತ್ತರಪ್ರದೇಶ ಎಸ್ಐಟಿ ತನಿಖೆ ಮುಂದುವರಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಉದ್ಯಮಿ ಆಗಿರುವ ಮನೀಷ್ ಗುಪ್ತಾ, ಗೋರಖ್ಪುರದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಮೃತಪಟ್ಟಿದ್ದರು.
ಈ ಬಗ್ಗೆ ಮಾತನಾಡಿದ್ದ ಸಾವನ್ನಪ್ಪಿದ ಉದ್ಯಮಿ ಪತ್ನಿ, ತನ್ನ ಪತಿಯನ್ನು ಪೊಲೀಸರೇ ಗುಂಡಿಟ್ಟು ಕೊಂದು ಹಾಕಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ ಸಿಎಂ ಪೊಲೀಸರ ವಿರುದ್ಧ ದೂರು ಸಹ ನೀಡಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು.
ಮನೀಷ್ ಗುಪ್ತಾರನ್ನು ಪೊಲೀಸರೇ ಕೊಂದ ಆರೋಪ ಬಂದ ಹಿನ್ನೆಲೆಯಲ್ಲಿ ಕಾನ್ಪುರಕ್ಕೆ ತೆರಳಿದ ಸಿಎಂ ಯೋಗಿ ಆದಿತ್ಯನಾಥ್ ಮೃತಪಟ್ಟ ಮನೀಷ್ ಗುಪ್ತಾ ಪತ್ನಿ ಮೀನಾಕ್ಷಿ ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಅಷ್ಟೇ ಅಲ್ಲ ಸೂಕ್ತ ನ್ಯಾಯದ ಭರವಸೆ ನೀಡಿದ್ದರು.
ಆ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಯೋಗಿ ಆದಿತ್ಯನಾಥ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಅಷ್ಟೇ ಅಲ್ಲ, ಹೋಟೆಲ್ ಮೇಲಿನ ದಾಳಿ ವೇಳೆ ನಿರ್ಲಕ್ಷ್ಯ ತೋರಿಸಿರುವ ಕಾರಣ ಹೇಳಿ ಆರು ಪೊಲೀಸರನ್ನು ಅಮಾನತು ಸಹ ಮಾಡಲಾಗಿದೆ. ಇನ್ನೊಂದೆಡೆ ಪೊಲೀಸರು ಗೋರಖ್ಪುರದಿಂದ ಪ್ರಕರಣವನ್ನು ಕಾನ್ಪುರಕ್ಕೆ ವರ್ಗಾಯಿಸಿ, ತನಿಖೆ ಮಾಡುತ್ತಿದ್ದಾರೆ.