ನವದೆಹಲಿ: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ 5 ಜಿಲ್ಲೆಗಳಲ್ಲಿ ಏಪ್ರಿಲ್ 26 ರವರೆಗೆ ಲಾಕ್‌ಡೌನ್ ವಿಧಿಸುವಂತೆ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಐದು ನಗರಗಳಲ್ಲಿ ಏಪ್ರಿಲ್ 26 ರವರೆಗೆ ಮಾಲ್‌ಗಳು, ಶಾಪಿಂಗ್ ಸಂಕೀರ್ಣಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವುದು ಸೇರಿದಂತೆ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಇದನ್ನು "ಸಂಪೂರ್ಣ ಲಾಕ್‌ಡೌನ್" ಎಂದು ಕರೆದಿರಲಿಲ್ಲ.
ನಿನ್ನೆ ಈ ಆದೇಶ ಹೊರಡಿಸಿದ್ದ ಅಲಹಾಬಾದ್ ಹೈಕೋರ್ಟ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಲಖನೌ, ಅಲಹಾಬಾದ್, ಕಾನ್ಪುರ್, ವಾರಣಾಸಿ ಮತ್ತು ಗೋರಖ್‌ಪುರದಲ್ಲಿ ಏ.10-ಏ.26ರವರೆಗೆ ಲಾಕ್‌ಡೌನ್ ಜಾರಿಗೆ ಸೂಚನೆ ನೀಡಿತ್ತು. ಈ ಆದೇಶಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಓದಿ: ಲಸಿಕಾ ತಯಾರಕರಿಗೆ ಮುಂಗಡವಾಗಿ 4,500 ಕೋಟಿ ರೂ. ನೀಡಲಿರುವ ಕೇಂದ್ರ ಸರ್ಕಾರ
ಈ ಕುರಿತಂತೆ ಇಂದು ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಸೋಂಕಿನ ಹರಡುವಿಕೆ ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೂಡಲೇ ಹೈಕೋರ್ಟ್‌ಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಯುಪಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.