ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಬಿಜೆಪಿ ಶಾಸಕರೊಬ್ಬರ ಪತ್ನಿಯನ್ನು 24 ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮ್ಮ ಮನೆಯಿಂದ ಸುಮಾರು 18 ಕಿ.ಮೀ. ದೂರದಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಸಕರ ಪತ್ನಿ ಪತ್ತೆಯಾಗಿದ್ದಾರೆ.
ಸುಲ್ತಾನ್‌ಪುರ ಜಿಲ್ಲೆಯ ಲಂಬುವಾ ಕ್ಷೇತ್ರದ ಬಿಜೆಪಿ ಶಾಸಕ ಸೀತಾರಾಮ್ ವರ್ಮಾ ಅವರ ಪತ್ನಿ ಪುಷ್ಪಾ ವರ್ಮಾ (65) ಮಂಗಳವಾರ ಬೆಳಗ್ಗೆ ತಮ್ಮ ಲಖನೌ ನಿವಾಸದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಸಂಬಂಧ ಶಾಸಕರ ಪುತ್ರ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪಂಕಜ್ ಕುಮಾರ್ ಅವರು ಗಾಜಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂತೆಯೇ, ಪುಷ್ಪಾ ವರ್ಮಾ ಪತ್ತೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಿದ್ದರು.
ಅಲ್ಲದೇ, ಶಾಸಕರ ಪತ್ನಿ ನಾಪತ್ತೆ ಬಗ್ಗೆ ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಿ, ಸುಳಿವು ನೀಡಿದವರೆಗೆ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಇದರೊಂದಿಗೆ ಸಿಸಿಟಿವಿ ಕ್ಯಾಮರಾಗಳು ಮತ್ತು ಸಾಮಾಜಿಕ ಜಾಲತಾಣಗಳ ಮೊರೆ ಕೂಡ ಪೊಲೀಸರು ಹೋಗಿದ್ದರು. ಹುಡುಕಾಟದ ಸಂದರ್ಭದಲ್ಲಿ ಇಂದು ಬೆಳಗ್ಗೆ ಬಾರಾಬಂಕಿಯ ಇಂದಿರಾನಗರದ ಬಳಿ ಶಾಸಕರ ಪತ್ನಿ ಪುಷ್ಪಾ ವರ್ಮಾ ಪತ್ತೆಯಾಗಿದ್ದಾರೆ ಎಂದು ಉತ್ತರ ಡಿಸಿಪಿ ಖಾಸಿಂ ಅಬ್ದಿ ತಿಳಿಸಿದ್ದಾರೆ.
ನಡೆದಿದ್ದೇನು?: ಶಾಸಕ ಸೀತಾರಾಮ್ ವರ್ಮಾ ಅವರ ಪತ್ನಿ ಪುಷ್ಪಾ ವರ್ಮಾ ಮರೆಗುಳಿತನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ವೈದ್ಯರಿಂದಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರ ನಡುವೆ ಗಾಜಿಪುರ ಸೆಕ್ಟರ್-8ರಲ್ಲಿರಲ್ಲಿರುವ ಶಾಸಕರ ಮನೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆಗೆ ಪುಷ್ಪಾ ಯಾರಿಗೂ ಹೇಳದೆ ಹೊರಗಡೆ ಬಂದಿದ್ದರು. ಆರಂಭದಲ್ಲಿ ಕುಟುಂಬಸ್ಥರು ಹಾಗೂ ಸಿಬ್ಬಂದಿ ವ್ಯಾಪಕ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಹೀಗಾಗಿ ಪುತ್ರ ಪಂಕಜ್ ಕುಮಾರ್ ತಮ್ಮ ತಂದೆ ಸೀತಾರಾಮ್ ಅವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಶಾಸಕ ಸೀತಾರಾಮ್ ಸುಲ್ತಾನ್‌ಪುರದಿಂದ ಲಖನೌಗೆ ಆಗಮಿಸಿದ್ದರು. ಅಲ್ಲದೇ, ಮಧ್ಯಾಹ್ನ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಪಂಕಜ್ ನಾಪತ್ತೆ ದೂರು ದಾಖಲಿಸಿದ್ದರು. ಜೊತೆಗೆ ಖುದ್ದು ಶಾಸಕರೇ ಡಿಸಿಪಿ ಅವರನ್ನು ಭೇಟಿಯಾಗಿ ತಮ್ಮ ಪತ್ನಿ ಹುಡುಕಾಟಕ್ಕೆ ನೆರವು ಕೇಳಿದ್ದರು. ಇದರಿಂದ ಪುಷ್ಪಾ ವರ್ಮಾ ಅವರನ್ನು ಪತ್ತೆ ಹಚ್ಚಲು ಗಾಜಿಪುರ ಮತ್ತು ಇಂದಿರಾನಗರ ಪೊಲೀಸರ ತಂಡಗಳನ್ನು ನಿಯೋಜಿಸಿದ್ದರು.
ಶಾಸಕ ಸೀತಾರಾಮ್ ವರ್ಮಾ ರಾಜಕೀಯಕ್ಕೆ ಬರುವ ಮೊದಲು ಸಹಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಈ ಹುದ್ದೆ ತೊರೆದು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡು, 2011ರಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು. ನಂತರ ಬದಲಾದ ಪರಿಸ್ಥಿತಿಯಲ್ಲಿ ಬಿಎಸ್ಪಿ ತೊರೆದು ಅವರು ಬಿಜೆಪಿಗೆ ಸೇರಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಲಂಬುವಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಜೈಸಿಂಗ್‌ಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಶಾಸಕರಾಗಿದ್ದರು.
ಇದನ್ನೂ ಓದಿ: ವಿರೋಧ ಪಕ್ಷಗಳ ನಾಯಕರ ಫೋನ್ ಹ್ಯಾಕಿಂಗ್ಗೆ ಯತ್ನ: ಸಂಸದ ಪಿ ಚಿದಂಬರಂ ಹೇಳಿದ್ದೇನು?