ಲಖನೌ( ಉತ್ತರಪ್ರದೇಶ): ದಿನದಿಂದ ದಿನಕ್ಕೆ ಉತ್ತರಪ್ರದೇಶ ಚುನಾವಣಾ ಕಾವು ಏರಿಕೆಯಾಗುತ್ತಿದೆ. ಮತ್ತೊಂದೆಡೆ ಅಕ್ರಮ ತಡೆಯಲು ಚುನಾವಣೆ ಆಯೋಗದೊಂದಿಗೆ ಆದಾಯ ತೆರಿಗೆ ಇಲಾಖೆಯೂ ಹದ್ದಿನ ಕಣ್ಣಿಟ್ಟಿದೆ. ಈ ನಡುವೆ ಇಲ್ಲಿನ ರಾಕಬ್ಗಂಜ್ನ ನೆಹರು ಕ್ರಾಸ್ ಬಳಿ ಹವಾಲಾ ವ್ಯಾಪಾರಿಯೊಬ್ಬರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಬರೋಬ್ಬರಿ 3ಕೋಟಿ ರೂ. ನಗದು ವಶಕ್ಕೆ ಪಡೆದಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಐದು ತಂಡಗಳು ತಡರಾತ್ರಿಯವರೆಗೂ ಆವರಣವನ್ನು ಸೀಲ್ ಮಾಡಿ ತನಿಖೆಯಲ್ಲಿ ತೊಡಗಿದ್ದವು. ಗಂಜ್ನಲ್ಲಿರುವ ಕಟ್ಟಡ ಸುತ್ತುವರಿದ ಪೊಲೀಸರು ಕೆಲವು ಅಂಗಡಿಗಳಲ್ಲಿ ಶೋಧ ಕಾರ್ಯ ನಡೆಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮತ್ತೊಂದು ಕಡೆ ಚುನಾವಣೆ ಹಿನ್ನೆಲೆಯಲ್ಲಿ ಹವಾಲ ದಂಧೆ ಈಗ ಭಾರಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದಾದ್ಯಂತ ಹವಾಲ ಜಾಲ ವ್ಯಾಪಕವಾಗಿ ಹರಡಿದೆ. ಹವಾಲ ಜಾಲವನ್ನು ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಐಟಿ ಇಲಾಖೆ ನಡೆಸಿರುವ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಈ ವ್ಯಕ್ತಿಗಳು ವೀಳ್ಯದೆಲೆ ವ್ಯಾಪಾರಿಗಳು ಎಂದು ಹೇಳಲಾಗುತ್ತಿದೆ. ಗೊಂಡಾದಲ್ಲಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಂಡ ಬಳಿಕ ಐಟಿ ತಂಡಗಳಿಗೆ ಈ ಬಗ್ಗೆ ಮಾಹಿತಿ ದೊರೆತಿತ್ತು. ಈ ಸುಳಿವು ಆಧರಿಸಿ ಲಖನೌದ ರಾಕಬ್ಗಂಜ್ನಲ್ಲಿ ದಾಳಿ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ, ಉದ್ಯಮಿಯೊಬ್ಬರಿಂದ ಮೊದಲು ಲೆಕ್ಕವಿಲ್ಲದ 35 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಸಿಕ್ಕ ಮಾಹಿತಿ ಮೇರೆಗೆ ನಡೆಸಿದ ಇನ್ನೊಂದು ದಾಳಿಯಲ್ಲಿ 2.5 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ.
ದಾಳಿಗೆ ಕಾರಣ ಏನು?
ಶುಕ್ರವಾರ ಪೊಲೀಸರು ಮತ್ತು ಐಟಿ ಅಧಿಕಾರಗಳ ತಂಡ ವಾಹನ ತಪಾಸಣೆ ಮಾಡುತ್ತಿತ್ತು. ಈ ವೇಳೆ ಲಖನೌದಿಂದ ಬರುತ್ತಿದ್ದ ಕಾರೊಂದರಲ್ಲಿ 65 ಲಕ್ಷ ರೂ. ನಗದು ಸಿಕ್ಕಿತ್ತು. ಈ ಕಾರಿನಲ್ಲಿ ಸಿಕ್ಕಿದ್ದ ಹಣಕ್ಕೆ ಲೆಕ್ಕ ಕೊಡಲು ಅದರಲ್ಲಿದ್ದವರು ವಿಫಲರಾಗಿದ್ದರು. ಆಗ ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹವಾಲ ದಂಧೆ ಬಯಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಮತ್ತು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಬೈಕ್ ಸವಾರನೊಬ್ಬನ ಕೊನೆ ಕ್ಷಣದ ಲೈವ್ ವಿಡಿಯೋ: ಏಕಾಏಕಿ ರಸ್ತೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ಯುವಕ