ಬಲರಾಂಪುರ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಕೋವಿಡ್ ಸೋಂಕಿತ ರೋಗಿಯ ಶವವನ್ನು ಸೇತುವೆಯಿಂದ ರಾಪ್ತಿ ನದಿಗೆ ಎಸೆಯಲಾಗುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಇಲ್ಲಿನ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮೇ 29 ರಂದು ಪಿಪಿಇ ಕಿಟ್ ಧರಿಸಿದ ವ್ಯಕ್ತಿಗಳು ಶವವನ್ನು ರಾಪ್ತಿ ನದಿಗೆ ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಲರಾಂಪುರದ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರಕಾರ, ಶವವನ್ನು ಪ್ರೇಮ್ ನಾಥ್ ಮಿಶ್ರಾ ಅವರ ದೇಹ ಎಂದು ಗುರುತಿಸಲಾಗಿದೆ. ಇವರನ್ನು ಮೇ 25 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮೇ 26 ರಂದು ಮತ್ತೊಂದು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಈ ವ್ಯಕ್ತಿ ಮೇ 28 ರಂದು ನಿಧನರಾಗಿದ್ದರು. ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಶವವನ್ನು ಮೇ 29 ರಂದು ಅವರ ಸೋದರಳಿಯನಿಗೆ ಹಸ್ತಾಂತರಿಸಲಾಗಿತ್ತು. ಆದರೆ ಆ ಬಳಿಕ ಇಂತಹ ವಿಡಿಯೋವೊಂದು ವೈರಲ್ ಆಗಿದೆ. ಸದ್ಯ ಪ್ರಕರಣ ದಾಖಲಿಸಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾನುವಾರ ತಿಳಿಸಿದ್ದಾರೆ.
ಇದನ್ನು ದೃಢೀಕರಿಸಿದ ಬಲರಂಪುರದ ಮುಖ್ಯ ವೈದ್ಯಾಧಿಕಾರಿ, "ಕೋವಿಡ್ ರೋಗಿಯ ಮೃತದೇಹವನ್ನು ನದಿಗೆ ಎಸೆಯಲಾಯಿತು. ಕೊರೊನಾ ಪ್ರೋಟೋಕಾಲ್ ಫಾಲೋ ಮಾಡಿ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ರಾಪ್ತಿ ನದಿಗೆ ಮೃತದೇಹ ಎಸೆದ ವಿಡಿಯೋ ವೈರಲ್: ಎಫ್ಐಆರ್ ದಾಖಲಿಸಿದ ಪೊಲೀಸರು
ನದಿಗಳಲ್ಲಿ ತೇಲುತ್ತಿರುವ ಕೊಳೆತ ದೇಹಗಳ ಬಗ್ಗೆ ಕಳೆದ ಕೆಲವು ವಾರಗಳಲ್ಲಿ ಹಲವಾರು ವರದಿಗಳು ಹೊರಬಿದ್ದಿವೆ. ಗಾಜಿಪುರದಲ್ಲಿ ಗಂಗಾ ನದಿಯ ತೀರದಲ್ಲಿ ಹಲವಾರು ಕೊಳೆತ ಮೃತ ದೇಹಗಳು ಹರಿದು ಬಂದಿದ್ದವು. ಬಿಹಾರದ ಬಕ್ಸಾರ್‌ನಲ್ಲೂ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರ ಪ್ರಕಾರ, ಉತ್ತರ ಪ್ರದೇಶದಲ್ಲಿ ಪ್ರಸ್ತುತ 41,214 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ 16,28,456 ಡಿಸ್ಚಾರ್ಜ್ ಮತ್ತು 20,346 ಸಾವುಗಳು ವರದಿಯಾಗಿವೆ.