ನವದೆಹಲಿ: ಉತ್ತರ ಭಾರತದಲ್ಲಿ ಅಕಾಲಿಕ ಮಳೆಯು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಆಲಿಕಲ್ಲುಸಹಿತ ಮಳೆ ಹಾಗೂ ವಿಪರೀತ ಗಾಳಿಯಿಂದಾಗಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿ ಮೂರು ರಾಜ್ಯಗಳಲ್ಲಿ 5.23 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಗೋಧಿ ಬೆಳೆ ನಾಶವಾಗಿದೆ. ಇದರಿಂದ ರೈತರು ಗೋಧಿ ಇಳುವರಿ ನಷ್ಟ ಅನುಭವಿಸಿದ್ದು, ಕೊಯ್ಲಿಗೂ ಸಮಸ್ಯೆ ಎದುರಿಸುವಂತಾಗಿದೆ.
ಈ ವರ್ಷ ಸುಮಾರು 34 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆಯಾಗಿದೆ. ಪ್ರಸಕ್ತ 2022-23ನೇ ಬೆಳೆ ವರ್ಷ (ಜುಲೈ- ಜೂನ್)ದಲ್ಲಿ ಅಂದಾಜು 112.2 ಮಿಲಿಯನ್ ಟನ್ ಗೋಧಿ ಉತ್ಪಾದನೆಯ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಆದರೆ, ಕೊಯ್ಲು ಗೋಧಿ ಮಳೆ ಮತ್ತು ಗಾಳಿಯಿಂದ ಮಣ್ಣು ಪಾಲಾಗಿದೆ. ಇದುವರೆಗೆ ಪ್ರಮುಖ ಮೂರು ರಾಜ್ಯಗಳಲ್ಲಿ ಸುಮಾರು 5.23 ಲಕ್ಷ ಹೆಕ್ಟೇರ್ ಗೋಧಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆ ಹಾನಿಯ ಮೌಲ್ಯಮಾಪನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಗಳೊಂದಿಗೆ ಕೇಂದ್ರದ ಸಮಾಲೋಚನೆ: ಸರ್ಕಾರ ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಮಾತನಾಡಿ, "ಕಳೆದ ಎರಡು ಮೂರು ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ಗೋಧಿ ಮತ್ತು ಇತರ ರಾಬಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಬೆಳೆ ನಷ್ಟದ ಪ್ರಮಾಣದ ತಿಳಿಯುವ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಸೋಮವಾರದಿಂದ ಸಮಲೋಚನೆ ನಡೆಸುತ್ತಿದೆ" ಎಂದು ಹೇಳಿದರು.
ಗೋಧಿ ಚಳಿಗಾಲದ ಪ್ರಮುಖ ಬೆಳೆಯಾಗಿದ್ದು, ಕೊಯ್ಲಿಗೆ ಬಹುತೇಕ ಸಿದ್ಧವಾಗಿದ್ದ ಸಮಯದಲ್ಲಿ ಅಕಾಲಿಕ ಮಳೆ ಸುರಿದಿದೆ. ಕಳೆದ ಎರಡು ವಾರಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗೋಧಿ ಬೆಳೆಯುವ ಪ್ರದೇಶದಲ್ಲಿ ಗುಡುಗು, ಆಲಿಕಲ್ಲು ಮತ್ತು ಬಿರುಗಾಳಿಯೊಂದಿಗೆ ಅಕಾಲಿಕ ಮಳೆ ಆಗುತ್ತಿದೆ. ಇದು ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಪ್ರಾರಂಭವಾಗಿದೆ.
ಅರ್ಧದಷ್ಟು ಇಳುವರಿ ಕುಸಿಯುವ ಭೀತಿ: "ಹವಾಮಾನ ವೈಪರೀತ್ಯದಿಂದ ಗೋಧಿ ಬೆಳೆಗೆ ಭಾರಿ ನಷ್ಟವಾಗಿದೆ. ಪ್ರತಿ ಎಕರೆಗೆ ಸರಾಸರಿ 20 ಕ್ವಿಂಟಲ್ ಇಳುವರಿ ನಿರೀಕ್ಷೆ ಇತ್ತು. ಈ ಬಾರಿ ಎಕರೆಗೆ 10-11 ಕ್ವಿಂಟಲ್‌ಗೆ ಇಳುವರಿ ಕುಸಿಯುವ ಆತಂಕ ಎದುರಾಗಿದೆ" ಎಂದು ಪಂಜಾಬ್‌ನ ಮೊಹಾಲಿ ಜಿಲ್ಲೆಯ ಬದರ್‌ಪುರ ಗ್ರಾಮದ ಬೆಳೆಗಾರ ಭೂಪಿಂದರ್ ಸಿಂಗ್ ತಮ್ಮ ಅಳಲು ತೋಡಿಕೊಂಡರು.
ಬದರ್‌ಪುರದಲ್ಲಿ 34 ಎಕರೆ ಪ್ರದೇಶದಲ್ಲಿ ಗೋಧಿ ಬೆಳೆಯಲಾಗಿದೆ ಎಂದ ಸಿಂಗ್, "ತಮ್ಮ ಹೊಲಗಳಲ್ಲಿ ಕೆಲವು ಸ್ಥಳಗಳಲ್ಲಿ ವೇಗದ ಗಾಳಿಯಿಂದಾಗಿ ಬೆಳೆ ನೆಲಸಮವಾಗಿದೆ. ಇದರಿಂದ ಈ ಒಟ್ಟು ಬೆಳೆಯಲ್ಲಿ ಸರಾಸರಿ ಶೇ.50ರಷ್ಟು ಇಳುವರಿ ನಷ್ಟ ಉಂಟಾಗಲಿದೆ. ಇನ್ನಷ್ಟು ದಿನ ಮಳೆ ಮುಂದುವರಿದರೆ ಬೆಳೆ ಸಂಪೂರ್ಣ ಮುಳುಗಡೆಯಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದರು.
ಧಾನ್ಯದ ಗುಣಮಟ್ಟದ ಕಡಿಮೆ: ಏತನ್ಮಧ್ಯೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಕೃಷಿ ಸಚಿವ ಜೆ.ಪಿ.ದಲಾಲ್ ಅವರು ಬೆಳೆ ನಷ್ಟ ನಿರ್ಣಯಿಸಲು ವಿಶೇಷ ಸರ್ವೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತೊಂದೆಡೆ, ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಸುಮಾರು 35,000 ಹೆಕ್ಟೇರ್ ಗೋಧಿ ಬೆಳೆ ಹಾನಿಯಾಗಿದೆ. ಅಂದಾಜು 1.25 ಲಕ್ಷ ಗೋಧಿ ಬೆಳೆಗಾರರು ನಷ್ಟ ಅನುಭವಿಸುವಂತೆ ಆಗಿದೆ ಎಂದು ಯುಪಿ ಪರಿಹಾರ ಆಯುಕ್ತ ಪ್ರಭು ಎನ್.ಸಿಂಗ್ ತಿಳಿಸಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್ಐ) ವಿಜ್ಞಾನಿ ಮತ್ತು ಗೋಧಿ ತಳಿ ತಜ್ಞ ರಾಜ್‌ಬೀರ್ ಯಾದವ್ ಮಾತನಾಡಿ, "ಆಲಿಕಲ್ಲು ಮಳೆ ಪೀಡಿತ ಪ್ರದೇಶಗಳಲ್ಲಿ ಗೋಧಿ ಬೆಳೆ ನಷ್ಟವಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಂಡಿಗಳಿಗೆ ತಲುಪಿಸಿದಾಗ ಮಾತ್ರ ಹಾನಿ ಪ್ರಮಾಣವನ್ನು ಲೆಕ್ಕ ಹಾಕಲು ಸಾಧ್ಯವಾಗುತ್ತದೆ. ಅಕಾಲಿಕ ಮಳೆಯು ಧಾನ್ಯದ ಗುಣಮಟ್ಟವನ್ನೂ ಕಡಿಮೆ ಮಾಡುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ತಪ್ಪಾದ ಔಷಧಿ ಸಿಂಪಡಣೆ: ಕಣ್ಣೆದುರೇ ಕಮರಿದ 4 ಎಕರೆ ದ್ರಾಕ್ಷಿ ಬೆಳೆ, ಆತ್ಮಹತ್ಯೆಗೆ ಶರಣಾದ ರೈತ