ನವದೆಹಲಿ: ಅನಗತ್ಯ ಮೊಕದ್ದಮೆ ದಾಖಲಿಸುವ ಬೇಜವಾಬ್ದಾರಿ ದೂರುದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ದೂರುದಾರರೊಬ್ಬರಿಗೆ 25 ಲಕ್ಷ ರೂ. ದಂಡ ವಿಧಿಸಿದೆ. ಸುಳ್ಳು ಮಾಹಿತಿ ನೀಡುವ, ಸತ್ಯ ಮರೆಮಾಚುವ ಮತ್ತು ಹಿತಾಸಕ್ತಿ ಸಾಧನೆಗಾಗಿ ಅರ್ಜಿ ಸಲ್ಲಿಸುವ ದೂರುದಾರರನ್ನು ಶಿಕ್ಷಿಸದೇ ಬಿಡಬಾರದು ಎಂದು ಕೋರ್ಟ್ ಈ ಸಂದರ್ಭದಲ್ಲಿ ಹೇಳಿದೆ.
- " class="align-text-top noRightClick twitterSection" data="">
ದೆಹಲಿಯಲ್ಲಿನ ವಾಣಿಜ್ಯ ವ್ಯವಹಾರವೊಂದರ ವಿಷಯದಲ್ಲಿ ಉದ್ಭವಿಸಿದ ಸಿವಿಲ್ ವಿವಾದದಲ್ಲಿ ಅಗತ್ಯ ಸಂಗತಿಗಳನ್ನು ಬಹಿರಂಗಪಡಿಸದೇ ಸುಳ್ಳು ಮತ್ತು ಕ್ಷುಲ್ಲಕ ದೂರಿನ ಆಧಾರದ ಮೇಲೆ ಕಕ್ಷಿದಾರರು ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸುಪ್ರೀಂಕೋರ್ಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ನ್ಯಾಯಪೀಠ, "ಈ ಪ್ರಕರಣದಲ್ಲಿ, ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಮತ್ತು ಅಂಥ ದೂರುಗಳನ್ನು ಸ್ವೀಕರಿಸಲು ಕ್ಷುಲ್ಲಕ ಕಾರಣಗಳನ್ನು ನೀಡುವ ಮೂಲಕ ಪ್ರಾದೇಶಿಕ ನ್ಯಾಯವ್ಯಾಪ್ತಿ ಇಲ್ಲದ ನ್ಯಾಯಾಲಯದ ಮುಂದೆ ಕ್ರಿಮಿನಲ್ ವಿಚಾರಣೆಯ ಅರ್ಜಿ ದಾಖಲಿಸಿರುವುದು ಕಂಡು ಬಂದಿದೆ. ಪ್ರತಿವಾದಿಯ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನ್ಯಾಯವ್ಯಾಪ್ತಿಯ ಅನುಚಿತ ಬಳಕೆಗಿಂತ ಇನ್ನೂ ಹೆಚ್ಚಿನ ದುರ್ವರ್ತನೆ ಕಂಡು ಬರುತ್ತದೆ" ಎಂದು ಹೇಳಿತು.
ಬೇಜವಾಬ್ದಾರಿ ದೂರು ಸಲ್ಲಿಸುವ ಕಕ್ಷಿದಾರರಿಗೆ ಮೊಕದ್ದಮೆಯ ವೆಚ್ಚಕ್ಕಾಗಿ ದಂಡ ವಿಧಿಸಬೇಕು ಮತ್ತು ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. "ಮರೆಮಾಚುವಿಕೆ, ಸುಳ್ಳು ಮತ್ತು ಹಿತಾಸಕ್ತಿಯ ಉದ್ದೇಶದಿಂದ ಸಲ್ಲಿಸಲಾದ ದಾವೆ ಪರಿಶೀಲಿಸಲು ಇದು ಸೂಕ್ತ ಸಮಯ" ಎಂದು ನ್ಯಾಯಪೀಠ ಹೇಳಿದೆ.
ಹಣಕಾಸು ವಹಿವಾಟುಗಳು ಮತ್ತು ಒಪ್ಪಂದಗಳನ್ನು ಒಳಗೊಂಡಿರುವ ವಿವಾದವು ಸಿವಿಲ್ ಮತ್ತು ವಾಣಿಜ್ಯ ಕಾನೂನಿನ ವ್ಯಾಪ್ತಿಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. "ಆದರೂ, ಪ್ರತಿವಾದಿಯು ನಿಜವಾದ ನ್ಯಾಯ ಹುಡುಕುವ ಬದಲು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಕ್ರಿಮಿನಲ್ ಆರೋಪಗಳನ್ನು ಮುಂದುವರಿಸಲು ಬಯಸಿದ್ದಾರೆ" ಎಂದು ನ್ಯಾಯಪೀಠ ಜನವರಿ 11 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ನ್ಯಾಯಾಂಗ ಪರಿಹಾರಗಳ ದುರುಪಯೋಗಕ್ಕೆ ಕಾರಣವಾಗುವ ಇಂತಹ ಕೃತ್ಯಗಳಿಂದ ಇತರರನ್ನು ತಡೆಯುವ ಉದ್ದೇಶದಿಂದ ದೂರುದಾರ ಕರಣ್ ಗಂಭೀರ್ ಅವರಿಗೆ ವೆಚ್ಚ ವಿಧಿಸಲು ನಿರ್ಧರಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
"ವಿವಾದವು ವಾಣಿಜ್ಯ ವಿವಾದವಾಗಿರುವ ಹೊರತಾಗಿಯೂ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಮತ್ತು ಮೇಲ್ಮನವಿದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಧಿಕಾರ ಮತ್ತು ಕಾನೂನು ಯಂತ್ರದ ದುರುಪಯೋಗದ ಇಂತಹ ಕೆಟ್ಟ ಉದ್ದೇಶದ ಕೃತ್ಯಗಳು ನ್ಯಾಯಾಂಗ ಕಾರ್ಯನಿರ್ವಹಣೆಯ ಮೇಲಿನ ಸಾರ್ವಜನಿಕ ನಂಬಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ" ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆಯ ದುರುಪಯೋಗವು ನಮ್ಮ ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಹಾನಿಗೊಳಿಸುವುದಲ್ಲದೇ, ಇದನ್ನು ಸರಿಪಡಿಸದಿದ್ದರೆ ಹಾನಿಕಾರಕ ಪೂರ್ವನಿದರ್ಶನವನ್ನು ರೂಪಿಸುತ್ತದೆ ಎಂದು ನ್ಯಾಯಪೀಠ ಒತ್ತಿ ಹೇಳಿತು. ದೆಹಲಿ ಮೂಲದ ಕಂಪನಿ ಡಿ ಡಿ ಗ್ಲೋಬಲ್ನ ಪ್ರವರ್ತಕ ಗಂಭೀರ್ ಅವರು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಕಂಪನಿಗಳ ಪ್ರವರ್ತಕರಾದ ದಿನೇಶ್ ಗುಪ್ತಾ ಮತ್ತು ರಾಜೇಶ್ ಗುಪ್ತಾ ವಿರುದ್ಧ ವಂಚನೆ ಮತ್ತು ಇತರ ಅಪರಾಧಗಳಿಗಾಗಿ ಎಫ್ಐಆರ್ ದಾಖಲಿಸಿದ್ದಾರೆ.
ದೂರುದಾರರ ಕಂಪನಿಯು ಗುಲಾಬ್ ಬಿಲ್ಡ್ ಟೆಕ್ಗೆ ಕ್ರಮವಾಗಿ 5,16,00,000 ರೂ ಮತ್ತು ವರ್ಮಾ ಬಿಲ್ಡ್ಟೆಕ್ಗೆ 11,29,50,000 ರೂ.ಗಳ ಅಲ್ಪಾವಧಿ ಸಾಲ ನೀಡಿತ್ತು. ರಿಯಲ್ ಎಸ್ಟೇಟ್ ವ್ಯವಹಾರದಿಂದ ಹೆಚ್ಚಿನ ಆದಾಯದ ಭರವಸೆ ನೀಡಿ ಅವುಗಳನ್ನು ನಂತರ ಸಾಲದ ಈಕ್ವಿಟಿಯಾಗಿ ಪರಿವರ್ತಿಸಲಾಯಿತು.
ಎಫ್ಐಆರ್ ಮತ್ತು ಇತರ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಈ ಪ್ರಕರಣ ಮುಂದುವರಿದರೆ ಅದು ನ್ಯಾಯಾಲಯದ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.
ನವದೆಹಲಿ ಮೂಲದ ಎರಡು ಕಂಪನಿಗಳ ಈಕ್ವಿಟಿಯಲ್ಲಿ ದೂರುದಾರರು ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೂ, ಆ ಪ್ರಕರಣಗಳಲ್ಲಿ, ಗೌತಮ್ ಬುದ್ಧ ನಗರದ ಸೆಕ್ಟರ್ 20 ರಲ್ಲಿ ತೋರಿಸುವ ಅಪೂರ್ಣ ವಿಳಾಸಗಳನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. "ಗೌತಮ್ ಬುದ್ಧ ನಗರದಲ್ಲಿ ಸುಳ್ಳು ನ್ಯಾಯವ್ಯಾಪ್ತಿಯನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು. ಆದರೆ ವಾಸ್ತವವಾಗಿ ವಿಳಾಸ ಅಲ್ಲಿ ಇರಲಿಲ್ಲ" ಎಂದು ನ್ಯಾಯಪೀಠ ಹೇಳಿದೆ.
2010 ರಲ್ಲಿ, ಅಲ್ಪಾವಧಿ ಸಾಲವನ್ನು ಒಂದು ವರ್ಷದ ಅವಧಿಗೆ ಮುಂಗಡವಾಗಿ ನೀಡಲಾಯಿತು. ಅದನ್ನು ಹಿಂದಿರುಗಿಸದಿದ್ದಾಗ, ಜುಲೈ 29, 2018 ರಂದು ಎಫ್ಐಆರ್ ದಾಖಲಿಸುವವರೆಗೆ, ಅಂದರೆ ಎಂಟು ವರ್ಷ ಏಳು ತಿಂಗಳ ನಂತರ ದೂರುದಾರರು ಅದನ್ನು ವಸೂಲಿ ಮಾಡಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿದೆ.
"ದೂರುದಾರರು ಉದ್ದೇಶಪೂರ್ವಕವಾಗಿ ಮತ್ತು ಅನಗತ್ಯವಾಗಿ ಸಾಕಷ್ಟು ವಿಳಂಬ ಉಂಟುಮಾಡಿದ್ದಾರೆ ಮತ್ತು ಸುಳ್ಳು ಮತ್ತು ಕ್ಷುಲ್ಲಕ ಮೊಕದ್ದಮೆಗಳನ್ನು ದಾಖಲಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ" ಎಂದು ನ್ಯಾಯಪೀಠ ಹೇಳಿದೆ.
"ಪ್ರತಿವಾದಿ ಕರಣ್ ಗಂಭೀರ್ ಅವರಿಗೆ ಇಂದಿನಿಂದ ನಾಲ್ಕು ವಾರಗಳಲ್ಲಿ ಈ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ 25 ಲಕ್ಷ ರೂ. ಠೇವಣಿ ಇಡುವಂತೆ ನಾವು ಆದೇಶಿಸುತ್ತೇವೆ. ಸದರಿ ಮೊತ್ತವನ್ನು ಸ್ವೀಕರಿಸಿದ ನಂತರ, ಅದನ್ನು ಎಸ್ಸಿಬಿಎ ಮತ್ತು ಎಸ್ಸಿಎಒಆರ್ಎ ಗೆ ಸಮಾನ ಪ್ರಮಾಣದಲ್ಲಿ ವರ್ಗಾಯಿಸಲಾಗುತ್ತದೆ, ಅದನ್ನು ಅವರ ಸದಸ್ಯರ ಅಭಿವೃದ್ಧಿ ಮತ್ತು ಪ್ರಯೋಜನಕ್ಕಾಗಿ ಬಳಸಲಾಗುತ್ತದೆ" ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ : 'ಖಲಿಸ್ತಾನ್ಗಾಗಿ ಭಾರತದಲ್ಲಿ ಜನಾಭಿಪ್ರಾಯ' ಗಣರಾಜ್ಯೋತ್ಸವಕ್ಕೆ ಬೆದರಿಕೆ ಹಾಕಿದ ಎಸ್ಎಫ್ಜೆ